ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಒಡಿಶಾ ಮೇಲುಗೈ
ಶ್ರೇಯಸ್ ಗೋಪಾಲ್‌ಗೆ 5 ವಿಕೆಟ್ ಗೊಂಚಲು

ಹೊಸದಿಲ್ಲಿ, ನ.22: ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಒಡಿಶಾ ತಂಡ ಕರ್ನಾಟಕ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ.
ಇಲ್ಲಿನ ಪಾಲಂ ‘ಎ’ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೆ ದಿನವಾದ ಮಂಗಳವಾರ ದಿನದಾಟ ಕೊನೆಗೊಂಡಾಗ ಒಡಿಶಾ ತಂಡ 9 ವಿಕೆಟ್‌ಗಳ ನಷ್ಟಕ್ಕೆ 318 ರನ್ ಗಳಿಸಿದ್ದು, ಒಟ್ಟು 139 ರನ್ ಮುನ್ನಡೆಯಲ್ಲಿದೆ.
ಬಸಂತ್ ಮೊಹಾಂತಿ(ಅಜೇಯ 16) ಹಾಗೂ ಮಂಗರಾಜ್(ಅಜೇಯ 10) ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟವಾದ ಸೋಮವಾರ ಕರ್ನಾಟಕವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 179 ರನ್‌ಗೆ ಆಲೌಟ್ ಮಾಡಿದ್ದ ಒಡಿಶಾ ಸೋಮವಾರ 2 ವಿಕೆಟ್‌ಗಳ ನಷ್ಟಕ್ಕೆ 42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಅಗ್ರ ಕ್ರಮಾಂಕದಲ್ಲಿ ನಾಯಕ ಗೋವಿಂದ್ ಪೊದ್ದಾರ್(44) ಉಪಯುಕ್ತ ಕೊಡುಗೆ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ವಿಕೆಟ್‌ಕೀಪರ್ ಸೌರಭ್ ರಾವತ್(85 ರನ್, 124 ಎಸೆತ, 12 ಬೌಂಡರಿ, 1 ಸಿಕ್ಸರ್)ಬಿಪ್ಲಬ್ ಸಮಂಟ್ರೆ(58 ರನ್, 190 ಎಸೆತ, 6 ಬೌಂಡರಿ) ಹಾಗೂ ಅಭಿಷೇಕ್ ಯಾದವ್(33) ಕರ್ನಾಟಕದ ಬೌಲರ್‌ಗಳನ್ನು ಕಾಡಿದರು.
ಒಡಿಶಾ 79 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ 6ನೆ ವಿಕೆಟ್‌ಗೆ 61 ರನ್ ಸೇರಿಸಿದ ಯಾದವ್ ಹಾಗೂ ಸಮಂಟ್ರೆ ತಂಡಕ್ಕೆ ಆಸರೆಯಾದರು. ಯಾದವ್ ಔಟಾದ ಬಳಿಕ ಸಮಂಟ್ರೆ ಹಾಗೂ ರಾವತ್ 7ನೆ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 246ಕ್ಕೆ ತಲುಪಿಸಿದರು.
ಈ ನಡುವೆ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಐದು ವಿಕೆಟ್ ಗೊಂಚಲು (5-73)ಪಡೆದರು. ಆದರೆ, ಗೋಪಾಲ್‌ಗೆ ಮತ್ತೊಂದು ಕಡೆಯಿಂದ ಯಾರಿಂದಲೂ ಸಾಥ್ ಸಿಗಲಿಲ್ಲ.
ಸ್ಕೋರ್ ವಿವರ
ಕರ್ನಾಟಕ ಪ್ರಥಮ ಇನಿಂಗ್ಸ್: 179 ರನ್‌ಗೆ ಆಲೌಟ್
ಒಡಿಶಾ ಪ್ರಥಮ ಇನಿಂಗ್ಸ್: 318/9
ಪಟ್ನಾಯಕ್ ಸಿ ಸಮರ್ಥ್ ಬಿ ಅರವಿಂದ್ 18
ರಂಜಿತ್ ಸಿಂಗ್ ರನೌಟ್ 06
ಗೋವಿಂದ್ ಪದ್ದಾರ್ ಸ್ಟಂ. ಗೌತಮ್ ಬಿ ಗೋಪಾಲ್ 44
ಧೀರಜ್ ಸಿಂಗ್ ಸಿ ಸಮರ್ಥ್ ಬಿ ಗೋಪಾಲ್ 08
ಸೇನಾಪತಿ ಬಿ ಗೌತಮ್ 01
ಅಭಿಷೇಕ್ ಯಾದವ್ ಸಿ ಗೌತಮ್ ಬಿ ವಿನಯ್ 33
ಸಮಂಟ್ರೆ ಸಿ ಅರವಿಂದ್ ಬಿ ಗೋಪಾಲ್ 58
ರಾವತ್ ಸಿ ಗೌತಮ್ ಬಿ ಗೋಪಾಲ್ 85
ಪ್ರಧಾನ್ ಎಲ್ಬಿಡಬ್ಲು ಗೋಪಾಲ್ 23
ಮೊಹಾಂತಿ ಅಜೇಯ 16
ಮಂಗರಾಜ್ ಅಜೇಯ 10
ಇತರ 16
ವಿಕೆಟ್ ಪತನ: 1-23, 2-37, 3-76, 4-79, 5-79, 6-140, 7-246, 8-281, 9-292.
ಬೌಲಿಂಗ್ ವಿವರ
ವಿನಯಕುಮಾರ್ 20-3-79-1
ಎಸ್.ಅರವಿಂದ್ 22-5-41-1
ಸ್ಟುವರ್ಟ್ ಬಿನ್ನಿ 16-3-48-0
ಮೋರೆ 11-2-31-0
ಎಸ್.ಗೋಪಾಲ್ 24-3-73-5
ಗೌತಮ್ 18-6-30-1
ರಣಜಿ ಟ್ರೋಫಿ: 2ನೆ ದಿನದ ಫಲಿತಾಂಶ
ಗುವಾಹಟಿ: ಆಂಧ್ರ 173/6, ಕೇರಳ 219
ಚೆನ್ನೈ: ಅಸ್ಸಾಂ 132/3, ಮಹಾರಾಷ್ಟ್ರ 542
ರೋಹ್ಟಕ್: ಬರೋಡಾ 97, 133, ಬಂಗಾಳ 76, 133
ಬರೋಡಾಕ್ಕೆ 21 ರನ್ ಜಯ
ವಲ್ಸಾಡ್: ಛತ್ತೀಸ್‌ಗಢ 124/1, ಹೈದರಾಬಾದ್ 351
ವಯನಾಡ್: ರಾಜಸ್ಥಾನ 238,19/1, ದಿಲ್ಲಿ 307
ಗಾಝಿಯಾಬಾದ್: ಹರ್ಯಾಣ 110/0, ಗೋವಾ 413
ಹುಬ್ಬಳ್ಳಿ: ಮುಂಬೈ 58/3, ಗುಜರಾತ್ 437
ಸೂರತ್: ಹಿಮಾಚಲಪ್ರದೇಶ 182/4, ಸರ್ವಿಸಸ್ 401
ಮುಂಬೈ: ತ್ರಿಪುರಾ 193/6, ಜಮ್ಮು-ಕಾಶ್ಮೀರ 315
ದಿಲ್ಲಿ: ಕರ್ನಾಟಕ 179, ಒಡಿಶಾ 318/9
ದಿಲ್ಲಿ: ಮ.ಪ್ರ. 71/3, ರೈಲ್ವೇಸ್ 371
ನಾಗ್ಪುರ: ತಮಿಳುನಾಡು 218/4, ಪಂಜಾಬ್ 284
ದಿಲ್ಲಿ: ಸೌರಾಷ್ಟ್ರ 301, ವಿದರ್ಭ 242/3
ಬರೋಡಾಕ್ಕೆ ರೋಚಕ ಜಯ
ರೋಹ್ಟಕ್, ನ.22: ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬರೋಡಾ ತಂಡ ಬಂಗಾಳ ವಿರುದ್ಧದ ಎ ಗುಂಪಿನ ರಣಜಿ ಪಂದ್ಯವನ್ನು 21 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
ಕೇವಲ ಎರಡೇ ದಿನದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಗೆಲ್ಲಲು 155 ರನ್ ಬೆನ್ನಟ್ಟಿದ ಬಂಗಾಳ ತಂಡ 133 ರನ್‌ಗೆ ಆಲೌಟಾಯಿತು. ಮೊದಲ ದಿನದಾಟವಾದ ಸೋಮವಾರ ಉಭಯ ತಂಡಗಳ 23 ವಿಕೆಟ್‌ಗಳು ಪತನವಾಗಿತ್ತು. ಎರಡನೆ ದಿನದಾಟವಾದ ಮಂಗಳವಾರ 17 ವಿಕೆಟ್‌ಗಳು ಉರುಳಿದವು.
ಈ ಋತುವಿನಲ್ಲಿ ಮೊದಲ ಗೆಲುವು ಸಂಪಾದಿಸಿದ ಬರೋಡಾ ತಂಡ ಆರು ಪಂದ್ಯಗಳಲ್ಲಿ ಒಟ್ಟು 9 ಅಂಕ ಗಳಿಸಿದೆ.
3 ವಿಕೆಟ್‌ಗಳ ನಷ್ಟಕ್ಕೆ 63 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಬರೋಡಾ ತಂಡ ಮುಕೇಶ್ ಕುಮಾರ್(5-45) ದಾಳಿಗೆ ತತ್ತರಿಸಿ 133 ರನ್‌ಗೆ ಆಲೌಟಾಯಿತು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಬಂಗಾಳ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 76 ರನ್‌ಗೆ ಆಲೌಟಾಗಿದ್ದ ಬಂಗಾಳ ಎರಡನೆ ಇನಿಂಗ್ಸ್‌ನಲ್ಲಿ 48 ಓವರ್‌ಗಳಲ್ಲಿ 133 ರನ್‌ಗೆ ಸರ್ವಪತನವಾಯಿತು.
2ನೆ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ ಅತೀತ್ ಷಾ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಬಾಬಾಶಫಿ ಪಠಾಣ್(3-34) ಹಾಗೂ ಇರ್ಫಾನ್ ಪಠಾಣ್(2-17) 5 ವಿಕೆಟ್ ಹಂಚಿಕೊಂಡರು. ಬಂಗಾಳದ ಪರ ನಾಯಕ ಮನೋಜ್ ತಿವಾರಿ ಸರ್ವಾಧಿಕ ರನ್(48 ಎಸೆತ, 39 ರನ್) ಬಾರಿಸಿದರು.
ಪಾಂಚಾಲ್ ದ್ವಿಶತಕ, ಗುಜರಾತ್‌ಗೆ ಮುನ್ನಡೆ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪ್ರಿಯಾಂಕ್ ಕೀರ್ತಿ ಪಾಂಚಾಲ್ ಬಾರಿಸಿದ ಚೊಚ್ಚಲ ದ್ವಿಶತಕದ ನೆರವಿನಿಂದ ಗುಜರಾತ್ ತಂಡ ಹಾಲಿ ಚಾಂಪಿಯನ ಮುಂಬೈನ ವಿರುದ್ಧ ಮೇಲುಗೈ ಸಾಧಿಸಿದೆ. 122 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಪಾಂಚಾಲ್ ಕೆಳ ಕ್ರಮಾಂಕದ ಕರಣ್ ಪಟೇಲ್ ಹಾಗೂ ಹಾರ್ದಿಕ್ ಪಟೇಲ್ ಅವರೊಂದಿಗೆ ಕ್ರಮವಾಗಿ 47 ಹಾಗೂ 42 ರನ್ ಸೇರಿಸಿ ಗುಜರಾತ್ ಮೊತ್ತವನ್ನು 400ರ ಗಡಿ ದಾಟಿಸಿದರು.
ಪಾಂಚಾಲ್ 434 ಎಸೆತಗಳಲ್ಲಿ 28 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 232 ರನ್ ಗಳಿಸಿ ಔಟಾದರು. ಮುಂಬೈ 10 ಬೌಲರ್‌ಗಳನ್ನು ದಾಳಿಗಿಳಿಸಿದ್ದು, ಈ ಪೈಕಿ ವಿಶಾಲ್ ದಾಭೋಲ್ಕರ್ 118 ರನ್‌ಗೆ 6 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.







