ನಿಷೇಧದಿಂದ ಪಾರಾದ ಪ್ಲೆಸಿಸ್‌ಗೆ ಭಾರೀ ದಂಡ
ಚೆಂಡು ವಿರೂಪ ವಿವಾದ

ಅಡಿಲೇಡ್(ಆಸ್ಟ್ರೇಲಿಯ), ನ.22: ಚೆಂಡು ವಿರೂಪ ವಿವಾದದಲ್ಲಿ ದಕ್ಷಿಣ ಆಫ್ರಿಕ ನಾಯಕ ಎಫ್‌ಡು ಪ್ಲೆಸಿಸ್ ತಪ್ಪಿತಸ್ಥರೆಂದು ಸಾಬೀತಾಗಿದ್ದು ಭಾರೀ ದಂಡ ವಿಧಿಸಲಾಗಿದೆ. ಆದರೆ, ಈ ವಾರ ಆಸ್ಟ್ರೇಲಿಯ ವಿರುದ್ಧ ಮೂರನೆ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಕಳೆದ ವಾರ ಹೊಬರ್ಟ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್‌ನ ವೇಳೆ ಚೆಂಡಿಗೆ ಸಿಹಿ ಅಥವಾ ಮಿಂಟ್ ಜೊಲ್ಲಿನ ರಸ ಸೇರಿಸಿ ಉಜ್ಜುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ಲೆಸಿಸ್‌ಗೆ ಪಂದ್ಯ ಶುಲ್ಕದಲ್ಲಿ 100ರಷ್ಟು ದಂಡ ವಿಧಿಸಲಾಗಿದೆ.
ಅಡಿಲೇಡ್‌ನಲ್ಲಿ ಐಸಿಸಿ ಪರ ಶಿಸ್ತು ವಿಚಾರಣೆ ನಡೆಸಿದ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಹೊಬರ್ಟ್‌ನಲ್ಲಿ ನಡೆದ ಘಟನೆಯ ವೀಡಿಯೊ ತುಣುಕನ್ನು ನೋಡಿ ಪ್ಲೆಸಿಸ್ ತಪ್ಪು ಮಾಡಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ.
‘‘ಅಂಪೈರ್‌ಗಳು ನೀಡಿರುವ ಪುರಾವೆಯ ಆಧರಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಟಿವಿ ವೀಡಿಯೊ ಫುಟೇಜ್‌ನಲ್ಲಿ ಚೆಂಡಿಗೆ ಕೃತಕ ವಸ್ತುವನ್ನು ಉಜ್ಜುತ್ತಿರುವುದು ಕಂಡು ಬಂದಿದೆ. ಪ್ಲೆಸಿಸ್ ವಿರುದ್ದ ತಕ್ಷಣವೇ ಕ್ರಮಗೊಳ್ಳಲಾಗುವುದು ಎಂದು ಎಂಸಿಸಿ ಮುಖ್ಯಸ್ಥರು ಐಸಿಸಿಗೆ ತಿಳಿಸಿದ್ದಾರೆ.
ಪ್ಲೆಸಿಸ್ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಎರಡನೆ ಬಾರಿ ದಂಡ ತೆರಬೇಕಾಗಿದೆ. 2013ರಲ್ಲಿ ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ 2ನೆ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಪಂದ್ಯ ಶುಲ್ಕದಲ್ಲಿ ಶೇ.50ರಷ್ಟು ದಂಡ ಪಾವತಿಸಿದ್ದರು.
‘ಮಿಂಟ್ ಗೇಟ್’(ಚೆಂಡಿಗೆ ಮಿಂಟ್ ಜೊಲ್ಲು ರಸ ಸೇರಿಸಿದ್ದು) ವಿವಾದ ಆಸ್ಟ್ರೇಲಿಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯದಲ್ಲಿ ಆಸ್ಟ್ರೇಲಿಯದ ಟಿವಿ ವರದಿಗಾರರು ಡು ಪ್ಲೆಸಿಸ್‌ರನ್ನು ಸಂದರ್ಶನ ನಡೆಸಲು ಮುಂದಾದಾಗ ಆಸ್ಟ್ರೇಲಿಯ ವರದಿಗಾರರು ಹಾಗೂ ದಕ್ಷಿಣ ಆಫ್ರಿಕದ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು.
ಸೆಪ್ಟಂಬರ್‌ನಲ್ಲಿ ಹೊಸ ಮಾದರಿಯ ಐಸಿಸಿ ನೀತಿ ಸಂಹಿತೆ ಜಾರಿಯಾಗಿದ್ದು, ಅದರನ್ವಯ ಪ್ಲೆಸಿಸ್ ಅವರ ಮೊದಲ ತಪ್ಪು ಇದಾಗಿದೆ ಎಂದು ಪರಿಗಣಿಸಲಾಗಿದೆ.
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಪ್ಲೆಸಿಸ್‌ಗೆ ದಂಡದ ಜೊತೆಗೆ ಶಿಸ್ತು ದಾಖಲೆಯಲ್ಲಿ ಮೂರು ಡಿಮೆರಿಟ್ ಅಂಕವನ್ನು ನೀಡಲಾಗಿದೆ. ಇನ್ನು 24 ತಿಂಗಳಲ್ಲಿ ಮತ್ತೆ ಡಿಮೆರಿಟ್ ಅಂಕವನ್ನು ಪಡೆದರೆ ಅದನ್ನು ಅಮಾನತು ಅಂಕವೆಂದು ಪರಿಗಣಿಸಿ ಒಂದು ಪಂದ್ಯದಿಂದ ನಿಷೇಧ ಹೇರಲಾಗುತ್ತದೆ.
ಚೆಂಡು ವಿರೂಪ ಪ್ರಕರಣ ಆಸ್ಟ್ರೇಲಿಯದಲ್ಲಿ ಉಭಯ ತಂಡಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಡು ಪ್ಲೆಸಿಸ್‌ರನ್ನು ಸಂದರ್ಶನ ಮಾಡಲು ಯತ್ನಿಸುವ ಮೂಲಕ ಆಸ್ಟ್ರೇಲಿಯ ಮಾಧ್ಯಮಗಳು ಕಿರುಕುಳ ನೀಡುತ್ತಿವೆ ಎಂದು ದಕ್ಷಿಣ ಆಫ್ರಿಕ ಕ್ರಿಕೆಟಿಗರು ಆಪಾದಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯ ತಂಡದಲ್ಲಿ ಬಿಕ್ಕಟ್ಟು ತಲೆ ಎತ್ತಿದೆ. ಆಸ್ಟ್ರೇಲಿಯ ತವರು ನೆಲದಲ್ಲಿ ಮೊದಲ ಬಾರಿ ವೈಟ್‌ವಾಶ್‌ನಿಂದ ಪಾರಾಗಲು ಹೋರಾಟ ನಡೆಸುತ್ತಿದೆ.
ಆಯ್ಕೆ ಸಮಿತಿಯ ಮುಖ್ಯಸ್ಥರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಅಡಿಲೇಡ್‌ನಲ್ಲಿ ಗುರುವಾರ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯದ ಆರು ಆಟಗಾರರನ್ನು ಕೈಬಿಡಲಾಗಿದೆ.







