ಹಿರಿಯ ಕಾಂಗ್ರೆಸ್ ನಾಯಕ ರಾಮ್‌ನರೇಶ್ ಯಾದವ್ ನಿಧನ
ಲಕ್ನೊ, ನ.22: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಮ್‌ನರೇಶ್ ಯಾದವ್ ದೀರ್ಘಕಾಲದ ಅಸ್ವಾಸ್ಥದ ಬಳಿಕ ಲಕ್ನೊದ ಎಸ್‌ಜಿಪಿಜಿಐ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಯಾದವ್ ನಾಲ್ಕು ಬಾರಿ ಶಾಸಕರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದರು ಹಾಗೂ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು.
ಅವರ ರಾಜ್ಯಪಾಲರಾಗಿದ್ದಾಗಿನ ಕೊನೆಯ ರಾಜಕೀಯ ಜೀವನದಲ್ಲಿ ವ್ಯಾಪಂ ಹಗರಣದಲ್ಲಿ ಒಳಗೊಂಡಿದ್ದ ಆರೋಪ ಬಂದಿತ್ತು. ವ್ಯಾಪಂ ನಡೆಸಿದ್ದ ಅರಣ್ಯ ರಕ್ಷಕರ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ 2015ರಲ್ಲಿ ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ ಯಾದವ್‌ರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಅವರ ಪುತ್ರ ಶೈಲೇಶ್ ಸಹ ವ್ಯಾಪಂ ಅಧ್ಯಾಪಕರ ನೇಮಕಾತಿ ಹಗರಣದ ಆರೋಪಿಯಾಗಿದ್ದರು. ಅವರು, ಮಿದುಳಿನ ಆಘಾತದಿಂದ ಲಕ್ನೊದಲ್ಲಿ ನಿಧನರಾಗಿದ್ದರು.
.............................
ನೋಟು ಅಮಾನ್ಯ ನಿರ್ಧಾರದಿಂದ ಬ್ಯಾಂಕ್‌ಗಳ ಬಂಡವಾಳ ಸ್ಥಿತಿ ಸುಧಾರಣೆ: ಅರುಣ್ ಜೇಟ್ಲಿ
ಹೊಸದಿಲ್ಲಿ, ನ.22: ನೋಟು ಅಮಾನ್ಯಗೊಳಿಸುವ ನಿರ್ಧಾರದಿಂದ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಬಂಡವಾಳ ಸಂಗ್ರಹವಾಗಿದ್ದು ತನ್ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರಕಾರಕ್ಕೆ ನೆರವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲೀ ತಿಳಿಸಿದ್ದಾರೆ.
ಇಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಹೀಗೆ ಬಂಡವಾಳ ಹರಿದು ಬಂದಾಗ ಕೃಷಿ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗುತ್ತದೆ. ಬ್ಯಾಂಕ್‌ಗಳು ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ ಎಂದರು. ನೋಟು ಅಮಾನ್ಯ ವಿಷಯದಲ್ಲಿ ನಾವು ಚರ್ಚೆಗೆ ಸಿದ್ದ ಎಂದು ಹೇಳುವ ಮೂಲಕ ರಾಜ್ಯಸಭೆಯಲ್ಲಿ ವಿಪಕ್ಷಗಳನ್ನು ಅಚ್ಚರಿಯಲ್ಲಿ ಕೆಡವಿದೆವು. ಇದೀಗ ಅವರು ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಜೇಟ್ಲಿ ಹೇಳಿದರು.







