ಹತ ಉಗ್ರರ ಬಳಿ ಹೊಸ ನೋಟುಗಳು
ಶ್ರೀನಗರ,ನ.22: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟ ಇಬ್ಬರು ಉಗ್ರರ ಬಳಿಯಿಂದ ಹೊಸ 2,000 ರೂ.ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರು ಈ ನೋಟುಗಳನ್ನು ಎಲ್ಲಿಂದ ಪಡೆದುಕೊಂಡಿದ್ದರು ಎನ್ನುವುದನ್ನು ಪತ್ತೆ ಹಚ್ಚಲು ಮುಂದಿನ ತನಿಖೆಗಾಗಿ ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು. ಹತ ಉಗ್ರರ ಗುರುತುಗಳನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ ಎಂದರು.
ಹತ ಉಗ್ರರು ವಿದೇಶಿಯರಂತೆ ಕಂಡು ಬರುತ್ತಿದ್ದಾರೆ. ಅವರು ಎಂದು ಕಣಿವೆಯೊಳಗೆ ನುಸುಳಿದ್ದರು ಎನ್ನುವುದು ಕಾಲಕ್ರಮೇಣ ತಿಳಿಯಲಿದೆ ಎಂದು ಅವರು ತಿಳಿಸಿದರು.
ಬಂಡಿಪೋರಾ ಜಿಲ್ಲೆಯ ಹಾಜಿನ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಪಡೆದಿದ್ದ ಭದ್ರತಾ ಪಡೆ ಸಿಬ್ಬಂದಿಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಉಗ್ರರು ಗುಂಡುಗಳನ್ನು ಹಾರಿಸಿದ್ದು,ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಉಗ್ರರಿಬ್ಬರು ಕೊಲ್ಲಲ್ಪಟ್ಟರು. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.





