ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ ಜೀವನಶ್ರೇಷ್ಠ ಸಾಧನೆ

ಹೊಸದಿಲ್ಲಿ, ನ.22: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೀವನಶ್ರೇಷ್ಠ ನಾಲ್ಕನೆ ಸ್ಥಾನ ತಲುಪಿದ್ದಾರೆ.
ಸೋಮವಾರ ವಿಶಾಖಪಟ್ಟಣದಲ್ಲಿ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಕ್ರಮವಾಗಿ 167 ಹಾಗೂ 81 ರನ್ ಗಳಿಸಿದ್ದ ಕೊಹ್ಲಿ ಒಟ್ಟು 248 ರನ್ ಕಲೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ರ್ಯಾಂಕಿಂಗ್‌ನಲ್ಲಿ 97 ಅಂಕ ಸಂಪಾದಿಸಿ ಇದೇ ಮೊದಲ ಬಾರಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.
50ನೆ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿರುವ ಕೊಹ್ಲಿ ಒಟ್ಟು 800 ಅಂಕ ಗಳಿಸಿದ್ದಾರೆ. ಈ ಸಾಧನೆ ಮಾಡಿರುವ ಭಾರತದ 11ನೆ ಬ್ಯಾಟ್ಸ್‌ಮನ್ ಕೊಹ್ಲಿ. ಶನಿವಾರ ಮೊಹಾಲಿಯಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್‌ನಲ್ಲೂ ಶ್ರೇಷ್ಠ ಫಾರ್ಮ್ ಮುಂದುವರಿಸಿದರೆ ರ್ಯಾಂಕಿಂಗ್‌ನಲ್ಲಿ ಮತ್ತಷ್ಟು ಭಡ್ತಿ ಪಡೆಯುವ ಸಾಧ್ಯತೆಯಿದೆ.
ವಿಶಾಖಪಟ್ಟಣದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 119 ರನ್ ಗಳಿಸಿದ್ದ ಚೇತೇಶ್ವರ ಪೂಜಾರ 9ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಐದು ಸ್ಥಾನ ಮೇಲಕ್ಕೇರಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಜೀವನಶ್ರೇಷ್ಠ 21ನೆ ಸ್ಥಾನ ತಲುಪಿದ್ದಾರೆ. ರವೀಂದ್ರ ಜಡೇಜ ಒಂದು ಸ್ಥಾನ ಮೇಲಕ್ಕೇರಿ 6ನೆ ಸ್ಥಾನದಲ್ಲಿದ್ದಾರೆ.







