ನೋಟು ರದ್ದತಿಯ ವಿರುದ್ಧ ಜನರ ಬಂಡಾಯ: ಮಮತಾ
ಕೋಲ್ಕತಾ, ನ.22: ಪಶ್ಚಿಮಬಂಗಾಳದಲ್ಲಿ ನಡೆದ ಉಪಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ವಿಜಯವು ನೋಟು ರದ್ದತಿಯ ವಿರುದ್ಧ ರಾಜ್ಯದ ಜನತೆ ನೀಡಿರುವ ತೀರ್ಪಾಗಿದೆಯೆಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ವ್ಯಾಖ್ಯಾನಿಸಿದ್ದಾರೆ. ವಿದೇಶಗಳಿಂದ ಕಪ್ಪುಹಣ ತರಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಜನ ವಿರೋಧಿ ನೋಟು ರದ್ದತಿಯ ಕ್ರಮಕ್ಕೆ ಉಪಚುನಾವಣೆಗಳ ಫಲಿತಾಂಶ ತಕ್ಕ ಉತ್ತರವಾಗಿದೆ. ಇದು ಕೇಂದ್ರ ವಿರುದ್ಧ ಸಾಮೂಹಿಕ ಬಂಡಾಯಕ್ಕಿಂತಲೂ ಜನರ ಬಂಡಾಯವಾಗಿದೆ. ಈ ಜನಾದೇಶದಿಂದ ಬಿಜೆಪಿ ಪಾಠ ಕಲಿಯಬೇಕೆಂದು ವಿಪಕ್ಷಗಳ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋಗುವ ಮುನ್ನ ಮಮತಾ, ಹೊಸದಿಲ್ಲಿಯಲ್ಲಿ ಪತ್ರಕರ್ತರೊಡನೆ ಹೇಳಿದರು.
ಪಂಜಾಬ್ ಹಾಗೂ ಉತ್ತರಪ್ರದೇಶ ಚುನಾವಣೆಗಳ ಬಳಿಕ ಬಿಜೆಪಿ ನಾಮಾವಶೇಷವಾಗಲಿದೆ. 2014ರ ಲೋಕಸಭಾ ಚುನಾವಣೆಯ ವೇಳೆ ನೀಡಿದ್ದ ವಾಗ್ದಾನದಂತೆ ವಿದೇಶಗಳಿಂದ ಕಪ್ಪುಹಣ ತರಲು ಮೋದಿ ಸರಕಾರ ವಿಫಲವಾಗಿದೆ. ಮೋದಿಯವರಿಂದ ಭರವಸೆ ಈಡೇರಿಸಲು ಸಾಧ್ಯವಾಗದುದರಿಂದ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ. ಜನಸಾಮಾನ್ಯರ ಬೆವರಿನ ಗಳಿಕೆಯನ್ನು ಕಸಿಯಲಾಗುತ್ತಿದೆಯೆಂದು ಅವರು ಆರೋಪಿಸಿದರು.





