82,500 ಎಟಿಎಮ್‌ಗಳು ಹೊಸನೋಟುಗಳ ವಿತರಣೆಗೆ ಸಜ್ಜು
ಹೊಸದಿಲ್ಲಿ,ನ.22: ಸೋಮವಾರ ಸಂಜೆಯವರೆಗೆ ದೇಶದಲ್ಲಿಯ 82,500, ಅಂದರೆ ಸುಮಾರು ಶೇ.40ರಷ್ಟು ಎಟಿಎಮ್‌ಗಳ ಮೂಲಕ ಹೊಸ 500 ಮತ್ತು 2,000 ರೂ. ನೋಟುಗಳ ವಿತರಣೆ ಸಾಧ್ಯವಾಗುವಂತೆ ಅವುಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದೆ. ದೇಶಾದ್ಯಂತ ಒಟ್ಟು 2.20 ಲಕ್ಷ ಎಟಿಎಂ ಕೇಂದ್ರಗಳಿವೆ.
ಎಟಿಎಂ ಯಂತ್ರಗಳನ್ನು ಪರಿಷ್ಕರಿಸುವಾಗ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆಯೊಂದಿಗೆ ಪ್ರಾದೇಶಿಕ ಸಮತೋಲನವನ್ನು ಕಾಯ್ದು ಕೊಳ್ಳಲಾಗಿದೆ ಎಂದು ಎಟಿಎಂ ಪರಿಷ್ಕರಣೆ ಯನ್ನು ತ್ವರಿತಗೊಳಿಸಲು ಆರ್‌ಬಿಐನ ಡೆಪ್ಯೂಟಿ ಗವರ್ನರ್ ಎಸ್.ಎಸ್.ಮುಂದ್ರಾ ಅವರ ನೇತೃತ್ವದಲ್ಲಿ ಸರಕಾರವು ರಚಿಸಿರುವ ಕಾರ್ಯಪಡೆಯ ಸದಸ್ಯರಾಗಿರುವ ಕ್ಯಾಷ್ ಲಾಜಿಸ್ಟಿಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ರಿತುರಾಜ್ ಸಿನ್ಹಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಅಗತ್ಯ ಮಾರ್ಪಾಡುಗಳ ಬಳಿಕ ಎಟಿಎಂಗಳು ಈಗ 50-60 ಲಕ್ಷ ನಗದು ಧಾರಣ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ.
ಇದರ ಪರಿಣಾಮವಾಗಿ ಹೆಚ್ಚಿನ ಎಟಿಎಂ ಯಂತ್ರಗಳಲ್ಲಿ ನಗದು ಹಣ ಹೆಚ್ಚಿನ ಸಮಯ ಲಭ್ಯವಿದ್ದು, ಅವುಗಳೆದುರು ಸರದಿ ಸಾಲುಗಳು ಕಿರಿದಾಗುತ್ತಿವೆ.
ಪರಿಷ್ಕರಣೆಗೆ ಮುನ್ನ ಈ ಎಟಿಎಮ್‌ಗಳಲ್ಲಿ 100 ರೂ.ನೋಟುಗಳ ಐದು ಲಕ್ಷ ರೂ.ಗಳನ್ನಷ್ಟೇ ತುಂಬಲು ಸಾಧ್ಯವಾಗುತ್ತಿತ್ತು ಮತ್ತು ಅದು ಬೇಗನೆಖಾಲಿಯಾಗಿ ಗ್ರಾಹಕರು ಪರ ದಾಡುವಂತಾಗಿತ್ತು ಎಂದು ಸಿನ್ಹಾ ತಿಳಿಸಿದರು.
ದಿನವೊಂದಕ್ಕೆ ಸರಾಸರಿ 12,000-14,000 ಎಟಿಎಂ ಯಂತ್ರಗಳಲ್ಲಿ ಅಗತ್ಯ ಮಾರ್ಪಾಡು ಗಳನ್ನು ಮಾಡಲಾಗುತ್ತಿದೆ,ಈ ತಿಂಗಳ ಅಂತ್ಯದ ಹೊತ್ತಿಗೆ ಎಟಿಎಂ ವ್ಯವಸ್ಥೆಯ ಸಹಜ ಕಾರ್ಯನಿರ್ವಹಣೆ ಸಾಧ್ಯವಾಗುವ ನಿರೀಕ್ಷೆಯಿದೆ ಎಂದರು.





