ವಿರಾಟ್ ಕೊಹ್ಲಿ ವಿರುದ್ಧ ಚೆಂಡು ವಿರೂಪ ಆರೋಪ!

ಲಂಡನ್, ನ.22: ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಡ್ರಾನಲ್ಲಿ ಕೊನೆಗೊಂಡಿದ್ದ ಮೊದಲ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಚೆಂಡನ್ನು ವಿರೂಪಗೊಳಿಸಿದ್ದರು ಎಂದು ಬ್ರಿಟನ್ ಮಾಧ್ಯಮ ಆರೋಪ ಮಾಡಿದೆ.
ಚೆಂಡಿಗೆ ಸಿಹಿ ಜೊಲ್ಲನ್ನು ಸೇರಿಸಿ ಕೊಹ್ಲಿ ವಿರೂಪಗೊಳಿಸಿದ್ದರು ಎಂದು ಆರೋಪಿಸಿರುವ ಬ್ರಿಟನ್‌ನ ಟ್ಯಾಬ್ಲಾಯ್ಡಾ ‘ದಿ ಡೈಲಿ ಮೈಲ್’ ಅದಕ್ಕೆ ಪೂರಕವಾದ ಪುರಾವೆ ನೀಡಲು ವಿಫಲವಾಗಿದೆ.
ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ವೇಳೆ ತನ್ನ ಕೈ ಬೆರಳನ್ನು ಬಾಯೊಳಗೆ ಹಾಕಿದ್ದರು. ಬಳಿಕ ಚೆಂಡಿನ ಒಂದು ಭಾಗ ಹೊಳಪು ಬರುವ ಹಾಗೆ ಪ್ಯಾಂಟ್‌ಗೆ ಉಜ್ಜಿರುವುದು ವಿಡಿಯೋ ಫುಟೇಟ್‌ನಲ್ಲಿ ಕಂಡು ಬಂದಿದೆ ಎಂದು ದಿನಪತ್ರಿಕೆ ವರದಿ ಮಾಡಿದೆ.
ಕೊಹ್ಲಿಯ ಬಾಯಿಯಲ್ಲಿ ಸಿಹಿ ವಸ್ತುವಿದ್ದ ಕಾರಣ ಬಲಗೈ ಬೆರಳನ್ನು ಬಾಯಿಗೆ ಹಾಕಿಕೊಂಡಿದ್ದರು. ಬಳಿಕ ಬೆರಳನ್ನು ಚೆಂಡಿಗೆ ತಾಗಿಸಿ ಚೆಂಡಿನ ಒಂದು ಭಾಗವನ್ನು ಹೊಳಪು ಬರುವಂತೆ ಮಾಡಿದ್ದಾರೆ. ಈ ದೃಶ್ಯ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ ಎಂದು ‘ಡೈಲಿ ಮೈಲ್’ ವರದಿ ಮಾಡಿದೆ.
ನ.9 ರಿಂದ 13ರ ತನಕ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದ ಬಳಿಕ ಅಂಪೈರ್‌ಗಳು ಹಾಗೂ ಮ್ಯಾಚ್ ರೆಫರಿ ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸದೆ ಇರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಾಧ್ಯಮಗಳು ವ್ಯಕ್ತಪಡಿಸಿರುವ ಸಂದೇಹ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.







