ಬ್ರೆಝಿಲ್‌ನ ಸ್ಟಾರ್ ನೇಮರ್‌ಗೆ 2 ವರ್ಷ ಜೈಲು ಶಿಕ್ಷೆಗೆ ಶಿಫಾರಸು

ಮ್ಯಾಡ್ರಿಡ್, ನ.23: ಬಾರ್ಸಿಲೋನಾ ತಂಡಕ್ಕೆ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಬ್ರೆಝಿಲ್‌ನ ಫುಟ್ಬಾಲ್ ಸ್ಟಾರ್ ನೇಮರ್‌ಗೆ ಎರಡು ವರ್ಷ ಜೈಲು ಸಜೆ ಮತ್ತು 10 ಮಿಲಿಯನ್ ಯುರೋ(10.6 ಮಿಲಿಯನ್ ಡಾಲರ್) ದಂಡ ವಿಧಿಸುವಂತೆ ಸ್ಪೇನ್‌ನ ಅಭಿಯೋಜಕರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದಾರೆ.
ಇದೇ ವೇಳೆ ಬಾರ್ಸಿಲೋನಾದ ಮಾಜಿ ಅಧ್ಯಕ್ಷ ಸ್ಯಾಂಡ್ರೊ ರಸೆಲ್‌ಗೆ ಐದು ವರ್ಷಗಳ ಜೈಲು ಸಜೆ ವಿಧಿಸುವಂತೆ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ. 2014ರಲ್ಲಿ ಭ್ರಷ್ಟಾಚಾರ ಹಗರಣ ಬೆಳಕಿಗೆ ಬಂದ ಬೆನ್ನಲ್ಲೆ ರಸೆಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಾರ್ಸಿಲೋನಾ ತಂಡದ ಹಾಲಿ ಅಧ್ಯಕ್ಷ ಜೋಸೆಪ್ ಮರಿಯಾ ಬಾರ್ಟೊಮಿ ಅವರು ಪ್ರಕರಣದಲ್ಲಿ ದೋಷಮುಕ್ತಗೊಂಡಿದ್ದಾರೆ.
ಬ್ರೆಝಿಲ್‌ನ ಇನ್ವೆಸ್ಟ್‌ಮೆಂಟ್ ಕಂಪೆನಿ ಡಿಐಎಸ್ ನೇಮರ್ ಮತ್ತು ಸಂಬಂಧಪಟ್ಟವರ ವಿರುದ್ಧ ದೂರು ನೀಡಿತ್ತು. 2013ರಲ್ಲಿ ಸ್ಯಾಂಟೊಸಿನ್‌ನಿಂದ ನೇಮರ್ ವರ್ಗಾವಣೆಯಾಗುವ ಹೊತ್ತಿಗೆ ಡಿಐಎಸ್ ಸಂಸ್ಥೆ ಶೇ 40ರಷ್ಟು ನೇಮರ್ ಅವರ ಸ್ಪೋರ್ಟಿಂಗ್ ರೈಟ್ಸ್‌ನ್ನು ಹೊಂದಿತ್ತು. ಡಿಐಎಸ್ ವಾದ ಮಂಡಿಸಿದ ವಕೀಲರು ನೇಮರ್ ಮತ್ತು ಅವರ ಹೆತ್ತವರಿಗೆ ಐದು ವರ್ಷ ಸಜೆ , ರಸೆಲ್ ಮತ್ತು ಬಾರ್ಟೊಮಿಗೆ 8 ವರ್ಷ ಸಜೆ , ಬಾರ್ಸಿಲೋನಾಕ್ಕೆ 195 ಮಿಲಿಯನ್ ದಂಡ ವಿಧಿಸುವಂತೆ ವಾದಿಸಿದ್ದರು. ನೇಮರ್ ಸಜೆ ಅನುಭವಿಸುವ ವೇಳೆ ಅವರಿಗೆ ಫುಟ್ಬಾಲ್‌ನಿಂದ ನಿಷೇಧ ಹೇರುವಂತೆ ನ್ಯಾಯಾಯಕ್ಕೆ ಮನವಿ ಮಾಡಿತ್ತು





