ಚತುರ್ರಾಷ್ಟ್ರ ಹಾಕಿ ಟೂರ್ನಿ: ಆಸ್ಟ್ರೇಲಿಯಕ್ಕೆ ಶರಣಾದ ಭಾರತ

ಮೆಲ್ಬೋರ್ನ್, ನ.23: ನಾಲ್ಕು ರಾಷ್ಟ್ರಗಳ ಆಹ್ವಾನಿತ ಪುರುಷರ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ವಿಶ್ವದ ನಂ.1 ತಂಡ ಆಸ್ಟ್ರೇಲಿಯ ಏಷ್ಯಾ ಚಾಂಪಿಯನ್ ಭಾರತವನ್ನು 3-2 ಅಂತರದಿಂದ ಮಣಿಸಿದೆ.
ಬುಧವಾರ ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯದ ಪರ ಜೆರೆಮಿ ಹೇವುಡ್ ಅವಳಿ ಗೋಲುಗಳನ್ನು(24ನೆ ಹಾಗೂ 36ನೆ ನಿಮಿಷ) ಬಾರಿಸಿದರು. ಟ್ರೆಂಟ್ ಮಿಟ್ಟನ್ 43ನೆ ನಿಮಿಷದಲ್ಲಿ 3ನೆ ಗೋಲು ಬಾರಿಸಿದ್ದಾರೆ.
ಭಾರತದ ಪರವಾಗಿ ರೂಪಿಂದರ್‌ಪಾಲ್ ಸಿಂಗ್(21 ಹಾಗೂ 53ನೆ ನಿಮಿಷ) ಅವಳಿ ಗೋಲು ಬಾರಿಸಿದರು. ಕಳೆದ ತಿಂಗಳು ಏಷ್ಯನ್ ಚಾಂಪಿಯನ್ ಟ್ರೋಫಿ ವಿಜೇತ ಭಾರತ ವಿರುದ್ಧ ಗೆಲುವು ಸಾಧಿಸಿರುವ ಆಸ್ಟ್ರೇಲಿಯ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿದೆ.
ಭಾರತ ಎಂದಿನಂತೆ ದ್ವಿತೀಯಾರ್ಧದಲ್ಲಿ ಗೋಲು ಬಾರಿಸಲು ಪರದಾಡಿತು. ತಂಡದಲ್ಲಿ ಖಾಯಂ ನಾಯಕ ಹಾಗೂ ವಿಕೆಟ್‌ಕೀಪರ್ ಪಿ.ಆರ್.ಶ್ರೀಜೇಶ್ ಹಾಗೂ ಹಿರಿಯ ಸ್ಟ್ರೈಕರ್ ಎಸ್‌ವಿ ಸುನೀಲ್ ಅನುಪಸ್ಥಿತಿ ಎದ್ದು ಕಂಡಿತು. ಎರಡು ಗೋಲು ಬಾರಿಸಿದ ರೂಪಿಂದರ್ ಭಾರತದ ಪರ ಏಕಾಂಗಿ ಹೋರಾಟ ನೀಡಿದರು.
21ನೆ ನಿಮಿಷದಲ್ಲಿ ಗೋಲು ಬಾರಿಸಿದ ರೂಪಿಂದರ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಹೇವುಡ್ 24ನೆ ನಿಮಿಷದಲ್ಲಿ ಗೋಲು ಬಾರಿಸಿ ಮೊದಲಾರ್ಧದಲ್ಲಿ 1-1 ರಿಂದ ಸಮಬಲ ಸಾಧಿಸಲು ನೆರವಾದರು.
36ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಬಾರಿಸಿ ಹೇವುಡ್ ಆಸ್ಟ್ರೇಲಿಯಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. 43ನೆ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಮಿಟ್ಟನ್ ಆಸ್ಟ್ರೇಲಿಯದ ಮುನ್ನಡೆಯನ್ನು 3-1ಕ್ಕೆ ಏರಿಸಿದರು. 53ನೆ ನಿಮಿಷದಲ್ಲಿ ರೂಪಿಂದರ್ ಮತ್ತೊಂದು ಗೋಲು ಬಾರಿಸಿ ಪ್ರತಿ ಹೋರಾಟ ನೀಡಿದರೂ ಅಂತಿಮವಾಗಿ ವಿಶ್ವದ ನಂ.1 ಆಸ್ಟ್ರೇಲಿಯ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಭಾರತ ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯವನ್ನು ಕೊನೆಯ ಬಾರಿ ಎದುರಿಸಿತ್ತು. ಆ ಪಂದ್ಯವನ್ನು ಕಾಂಗರೂ ಪಡೆ 3-1 ರಿಂದ ಗೆದ್ದುಕೊಂಡಿತ್ತು.
ಚತುರ್ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ನ್ಯೂಝಿಲೆಂಡ್ ಹಾಗೂ ಮಲೇಷ್ಯಾ ತಂಡಗಳು ಭಾಗವಹಿಸುತ್ತಿವೆ. ಭಾರತ ನ.24 ರಂದು ಮಧ್ಯಾಹ್ನ 12:30ಕ್ಕೆ ಮಲೇಷ್ಯಾವನ್ನು ಎದುರಿಸಲಿದೆ. ನ.26ರಂದು ಮಧ್ಯಾಹ್ನ 11-30ಕ್ಕೆ ನ್ಯೂಝಿಲೆಂಡ್‌ನ್ನು ಎದುರಿಸುವುದು.
ಆಸ್ಟ್ರೇಲಿಯವನ್ನು ಮಣಿಸಿದ ಭಾರತದ ಮಹಿಳಾ ಹಾಕಿ ತಂಡ
ಮೆಲ್ಬೋರ್ನ್, ನ.23: ಆತಿಥೇಯ ಆಸ್ಟ್ರೇಲಿಯವನ್ನು 1-0 ಗೋಲು ಅಂತರದಿಂದ ಮಣಿಸಿದ ಭಾರತದ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ.
ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ವಿಶ್ವದ ನಂ.12ನೆ ತಂಡ ಭಾರತ ಇದೇ ಮೊದಲ ಬಾರಿ ನಾಲ್ಕನೆ ರ್ಯಾಂಕಿನ ಆಸ್ಟ್ರೇಲಿಯ ತಂಡವನ್ನು ಮಣಿಸಿ ಗಮನ ಸೆಳೆಯಿತು.
ನಾಯಕಿ ರಾಣಿ ರಾಂಪಾಲ್ 21ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿ ಭಾರತದ ಪರ ಗೆಲುವಿನ ಗೋಲು ಬಾರಿಸಿದರು.
ಭಾರತದ ಗೋಲ್‌ಕೀಪರ್ ರಂಜನಿ ಅತ್ಯುತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯ ಆಟಗಾರ್ತಿಯರನ್ನು ನಿರಾಸೆಗೊಳಿಸಿದರು. ಭಾರತೀಯ ಆಟಗಾರ್ತಿಯರು ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು.
ಉಭಯ ತಂಡ ರಿಯೋ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಆಡಿದ್ದವು. ಆ ಪಂದ್ಯದಲ್ಲಿ ಆಸ್ಟ್ರೇಲಿಯ 6-1 ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಎರಡು ತಂಡಗಳು ನ.25 ರಂದು ಎರಡನೆ ಹಾಗೂ ನ.27 ರಂದು ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿವೆ.
ಈ ತಿಂಗಳಾರಂಭದಲ್ಲಿ ಚೀನಾದ ವಿರುದ್ಧ 2-1 ರಿಂದ ಗೆಲುವು ಸಾಧಿಸಿದ್ದ ಭಾರತ ಮಹಿಳೆಯರ ಏಷ್ಯಾ ಚಾಂಪಿಯನ್ ಟ್ರೋಫಿಯನ್ನು ಜಯಿಸಿತ್ತು.







