ಸೈನಾ ನೆಹ್ವಾಲ್ ಶುಭಾರಂಭ
ಹಾಂಕಾಂಗ್ ಓಪನ್ ಸೂಪರ್ ಸರಣಿ

ಕೌಲೂನ್, ನ.23: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಂಕಾಂಗ್ ಓಪನ್ ಸೂಪರ್ ಸರಣಿಯಲ್ಲಿ ಎರಡನೆ ಸುತ್ತಿಗೆ ತಲುಪುವ ಮೂಲಕ ಶುಭಾರಂಭ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಎರಡನೆ ಟೂರ್ನಿಯನ್ನು ಆಡಿದ ಸೈನಾ ಬುಧವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಟಿಪ್ ಬುರನ್‌ಪ್ರಸೆರ್ಟ್‌ಸಕ್‌ರನ್ನು 12-21, 21-19, 21-17 ಗೇಮ್‌ಗಳ ಅಂತರದಿಂದ ಮಣಿಸಿದರು.
ದುಬೈ ಸೂಪರ್ ಸರಣಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿರುವ ಐದನೆ ಶ್ರೇಯಾಂಕದ ಸೈನಾ ಮುಂದಿನ ಸುತ್ತಿನಲ್ಲಿ ಚಿಯಾಂಗ್ ಮೀ ಹ್ಯೂ ಅಥವಾ ಜಪಾನ್‌ನ ಸಯಾಕಾ ಸಾಟೊರನ್ನು ಎದುರಿಸಲಿದ್ದಾರೆ.
ಸೈನಾ ಮುಂದಿನ ಸುತ್ತಿನ ಪಂದ್ಯವನ್ನು ಜಯಿಸಿದರೆ ಸಹ ಆಟಗಾರ್ತಿ ಸಿಂಧು ಅವರೊಂದಿಗೆ ದುಬೈ ಫೈನಲ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಸ್ವಿಸ್ ಓಪನ್ ವಿನ್ನರ್ ಎಚ್‌ಎಸ್ ಪ್ರಣಯ್ ಚೀನಾದ ಕ್ಷಿಯಾವೊ ಬಿನ್‌ರನ್ನು 21-16, 21-18 ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ನ್ಯಾಶನಲ್ ಚಾಂಪಿಯನ್ ಸಮೀರ್ ವರ್ಮ ಜಪಾನ್‌ನ ತಕುಮಾ ಯುಡಾರನ್ನು 22-20, 21-18 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕೊರಿಯಾದ ಸೊಯಿಯು ಚೊಯ್ ಹಾಗೂ ಕೊ ಸಂಗ್‌ಹಿನ್‌ರನ್ನು 15-21, 8-21 ಗೇಮ್‌ಗಳ ಅಂತರದಿಂದ ಮಣಿಸಿದರು.







