ರೈತರಿಗೆ 21 ಸಾವಿರ ಕೋಟಿ ರೂ. ಹಂಚುವಂತೆ
ನಬಾರ್ಡ್‌ಗೆ ಸರಕಾರದ ಸೂಚನೆ
ಹೊಸದಿಲ್ಲಿ, ನ.23: ನಗದು ಹಣದ ಅಭಾವವಿರುವ ರೈತರಿಗೆ ರೂ.21 ಸಾವಿರ ಕೋಟಿ ಹಂಚಿಕೆ ಮಾಡಿ ಚಳಿಗಾಲದ ಬೆಳೆ ಬಿತ್ತನೆಗೆ ಸಹಾಯ ಮಾಡಲು ಸರಕಾರವು ನಬಾರ್ಡ್‌ಗೆ ಅನುಮತಿ ನೀಡಿದೆಯೆಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತದಾಸ್ ಇಂದು ತಿಳಿಸಿದ್ದಾರೆ.
ನೋಟು ರದ್ದತಿಯಿಂದ ಬಿತ್ತನೆ ಹಂಗಾಮಿನಲ್ಲಿ ರೈತರ ಕೈ ಬರಿದಾಗಿದೆ.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್(ನಬಾರ್ಡ್) ರೈತರಿಗೆ ಪಾವತಿಸುವುದಕ್ಕಾಗಿ ಕೃಷಿ ಸಹಕಾರ ಬ್ಯಾಂಕ್‌ಗಳಿಗೆ ಹಣವನ್ನು ವಿತರಿಸಲಿದೆಯೆಂದು ದಾಸ್ ಹೇಳಿದ್ದಾರೆ.
ಹಾಲಿ ರಬಿ ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಿಗೆ ಸೌಲಭ್ಯ ಕಲ್ಪಿಸಲು ಹಾಗೂ ವಿಶೇಷವಾಗಿ ರೈತರ ಲಾಭಕ್ಕಾಗಿ ನಬಾರ್ಡ್. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ರೂ.21 ಸಾವಿರ ಕೋಟಿಯ ವಿಶೇಷ ಮಿತಿಯನ್ನು ಮಂಜೂರು ಮಾಡಿದೆಯೆಂದು ಅವರು ಹೊಸದಿಲ್ಲಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಶೇ.40ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರ ಸಂಸ್ಥೆಗಳಿಂದ ಕೃಷಿ ಸಾಲ ಪಡೆಯುತ್ತಾರೆಂದು ದಾಸ್ ಹೇಳಿದರು.
ಆರ್‌ಬಿಐ ನಿನ್ನೆ ರೈತರಿಗೆ ಕೃಷಿ ಸಾಲ ನೀಡುವ ನಿಯಮಾವಳಿ ಸಡಿಲಿಸಿ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಕೃಷಿ ಸಾಲ ನೀಡಿಕೆಗಾಗಿ ರೂ.23 ಸಾವಿರ ಕೋಟಿ ಹಂಚಲು ನಬಾರ್ಡ್‌ಗೆ ಅವಕಾಶ ಕಲ್ಪಿಸಿದೆ.
ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಈ ನಿಧಿಯನ್ನು ಪ್ರಾಥಮಿಕ ಪತ್ತಿನ ಬ್ಯಾಂಕ್‌ಗಳಿಗೆ ವರ್ಗಾಯಿಸುತ್ತವೆ. ಇದರಿಂದ ರಬಿ ಹಂಗಾಮಿನಲ್ಲಿ ರೈತರ ಕೃಷಿ ಸಾಲದ ಬೇಡಿಕೆ ಪೂರೈಕೆಯಾಗುವುದೆಂದು ದಾಸ್ ತಿಳಿಸಿದರು.





