ನೋಟು ಅಮಾನ್ಯಗೊಳಿಸಿದ ಬಳಿಕ ಜನಧನ್ ಖಾತೆಗೆ ಹರಿದುಬಂದ ಠೇವಣಿ
ಹೊಸದಿಲ್ಲಿ, ನ.23: ಈ ತಿಂಗಳ ಆರಂಭದಲ್ಲಿ ಸರಕಾರ ನೋಟು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಜನಧನ್ ಖಾತೆಗೆ ಭರಪೂರ ಠೇವಣಿ ಹಣ ಜಮೆಯಾಗಿದ್ದು ಕಳೆದ 13 ದಿನಗಳಲ್ಲಿ ಸುಮಾರು 21,000 ಕೋಟಿ ರೂ. ಠೇವಣಿ ಜಮೆಯಾಗಿದೆ. ಪಶ್ಚಿಮಬಂಗಾಲ ರಾಜ್ಯ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ನೋಟು ಅಮಾನ್ಯಗೊಳಿಸುವ ಮುನ್ನ ದೇಶದಲ್ಲಿದ್ದ ಒಟ್ಟು 25.5 ಕೋಟಿ ಜನಧನ್ ಖಾತೆಗಳಲ್ಲಿ ಜಮೆಯಾಗಿದ್ದ ಹಣ 45,636.61 ಕೋಟಿ ರೂ. ಪ್ರಸ್ತುತ ಈ ಖಾತೆಗಳಲ್ಲಿ ಒಟ್ಟು 66,636 ಕೋಟಿ ರೂ. ಠೇವಣಿಯಿದೆ. ಶೂನ್ಯ ಶಿಲ್ಕು (ಝೀರೋ ಬ್ಯಾಲೆನ್ಸ್) ಜನಧನ ಖಾತೆಯಲ್ಲಿ ಏಕಾಏಕಿ ಠೇವಣಿ ಜಮೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವುದು ಇದಕ್ಕೆ ಕಾರಣ. ಅವ್ಯವಹಾರದ ಶಂಕೆ ಬಂದರೆ ಸಂಬಂಧಿಸಿದ ವಿಭಾಗಗಳು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಈಗಾಗಲೇ ಹೇಳಿದ್ದಾರೆ. ದೇಶದಲ್ಲಿರುವ ಎಲ್ಲ ಕುಟುಂಬಗಳನ್ನೂ ಬ್ಯಾಂಕ್ ವ್ಯವಹಾರದಡಿ ತರುವ ಮತ್ತು ಕುಟುಂಬದ ಕನಿಷ್ಠ ಓರ್ವ ವ್ಯಕ್ತಿಯಾದರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ 2014ರ ಆಗಸ್ಟ್ 28ರಂದು ಪ್ರಧಾನಮಂತ್ರಿ ಜನಧನ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ಖಾತೆಗಳಲ್ಲಿ 50 ಸಾವಿರ ರೂ. ಮಿತಿಯೊಳಗೆ ಠೇವಣಿ ಇಡಬಹುದು.





