ನಗದು ರಹಿತ ವ್ಯವಹಾರಕ್ಕೆ ಉಚಿತ ಮೊಬೈಲ್ ಫೋನ್ ವಿತರಣೆ
ಆಂಧ್ರ ಸರಕಾರದ ಯೋಜನೆ
ವಿಜಯವಾಡ, ನ.24: ನಗದು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆರ್ಥಿಕವಾಗಿ ಹಿಂದುಳಿದ ಜನರಿಗೆ ನಗದು ರಹಿತ ವ್ಯವಹಾರ ನಡೆಸಲು ಸಾಧ್ಯವಾಗುವಂತೆ ಧರ್ಮಾರ್ಥವಾಗಿ ಮೊಬೈಲ್ ಫೋನ್‌ಗಳನ್ನು ವಿತರಿಸಲು ಆಂಧ್ರಪ್ರದೇಶ ಸರಕಾರ ಯೋಜನೆ ಹಾಕುತ್ತಿದೆ.
ಇಂದಿಲ್ಲಿ ಆರ್‌ಬಿಐ ಅಧಿಕಾರಿಗಳು ಹಾಗೂ ಬ್ಯಾಂಕರ್‌ಗಳ ಜೊತೆ ನಡೆಸಿದ ಪರಾಮರ್ಶೆ ಸಭೆಯಲ್ಲಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಈ ಪ್ರಸ್ತಾವವನ್ನು ಮುಂದಿರಿಸಿದ್ದಾರೆ.
ಡಿಜಿಟಲ್ ಹಣ ವರ್ಗಾವಣೆಗೆ ಪ್ರತಿಯೊಬ್ಬನಿಗೂ ಮೊಬೈಲ್ ಫೋನ್ ಅಗತ್ಯ. ಅದಕ್ಕಾಗಿ ತಾವು ಈ ಚಿಂತನೆಯನ್ನು ಅನುಷ್ಠಾನಗೊಳಿಸಲು ಹಾಗೂ ಮೊಬೈಲ್ ಫೋನ್ ವಿತರಿಸಲು ಬಯಸಿದ್ದೇವೆಂದು ಅವರು ಹೇಳಿದ್ದಾರೆ.
ನ.28ರೊಳಗೆ ಇನ್ನೂ ರೂ. 3,000 ಕೋಟಿ ವೌಲ್ಯದ ಹೊಸ ನೋಟುಗಳು ರಾಜ್ಯಕ್ಕೆ ತಲುಪುವ ನಿರೀಕ್ಷೆಯಿದೆಯೆಂದು ಆರ್‌ಬಿಐ ಅಧಿಕಾರಿಗಳು ನಾಯ್ಡುಗೆ ತಿಳಿಸಿದ್ದಾರೆ.
ಅವುಗಳಲ್ಲಿ ರೂ. 60 ಕೋಟಿಯಷ್ಟು ವೌಲ್ಯದ ಸಣ್ಣ ಮುಖಬೆಲೆಯ ನೋಟುಗಳು ಇರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.
ನೋಟಿನ ಸಮಸ್ಯೆ ನಿವಾರಣೆಯಾಗುವವರೆಗೆ ಟೆಲಿ ಕಾನ್ಫರೆನ್ಸ್ ಮೂಲಕ ಉನ್ನತಾಧಿಕಾರಿಗಳೊಂದಿಗೆ ಸತತವಾಗಿ ಪರಿಸ್ಥಿತಿಯನ್ನು ಪರಾಮರ್ಶಿಸುವಂತೆ ಬ್ಯಾಂಕರ್‌ಗಳಿಗೆ ನಾಯ್ಡು ಸೂಚನೆ ನೀಡಿದ್ದಾರೆ.
ಆರ್‌ಬಿಐ ಪ್ರತಿನಿಧಿ ಹರಿಶಂಕರ್, ಆಂಧ್ರ ಬ್ಯಾಂಕ್‌ನ ಉಪಮಹಾಪ್ರಬಂಧಕ ಜಿ.ಎಸ್.ವಿ.ಕೃಷ್ಣ ರಾವ್ ಹಾಗೂ ಇತರ ಹಿರಿಯಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.





