ವಿವಾಹದ ಖರ್ಚಿಗೆ 2.5 ಲಕ್ಷ ಪಡೆಯಲು ಕಠಿಣ ಷರತ್ತಿನ ರಗಳೆ
ಜೈಪುರ, ನ.24: ಮದುವೆಗೆ 2.5 ಲಕ್ಷ ರೂ. ಹಣ ವಾಪಸು ಪಡೆಯಬಹುದು ಎಂದು ಕೇಂದ್ರ ಸರಕಾರ ಹೇಳಿದ್ದರೂ ಈ ಬಗ್ಗೆ ಕಠಿಣ ನಿಯಮಾವಳಿ ರೂಪಿಸಿರುವ ಕಾರಣ ಮದುವೆಯ ಸಂಭ್ರಮದಲ್ಲಿರುವ ಮಂದಿ ಸಂಕಷ್ಟ ಪಡುವಂತಾಗಿದೆ. ಮಂಗಳವಾರ ಅಧಿಕ ಸಂಖ್ಯೆಯಲ್ಲಿ ಜನರು ಬ್ಯಾಂಕಿಗೆ ಆಗಮಿಸಿ ಮದುವೆ ಸಮಾರಂಭವಿರುವ ಕಾರಣ 2.5ಲಕ್ಷ ಹಣ ಒದಗಿಸುವಂತೆ ಮನವಿ ಮಾಡಿದ್ದರು. ಆದರೆ ಅವರ ಬಳಿ ಅಗತ್ಯ ದಾಖಲೆ ಪತ್ರಗಳು ಇಲ್ಲದ ಕಾರಣ ಅವರು ನಿರಾಶೆಯಿಂದ ಬರಿಗೈಯಲ್ಲಿ ಮರಳುವಂತಾಗಿದೆ ಎಂದು ಇಲ್ಲಿಯ ಮಾನ್‌ಸರೋವರ್‌ನಲ್ಲಿರುವ ಎಸ್‌ಬಿಐ ಶಾಖೆಯೊಂದರ ಅಧಿಕಾರಿ ತಿಳಿಸಿದ್ದಾರೆ. ಮದುವೆ ಸಮಾರಂಭ ಇರುವ ಕುಟುಂಬದವರು 2.5 ಲಕ್ಷ ಹಣ ಬ್ಯಾಂಕಿನಿಂದ ಪಡೆಯಬಹುದು ಎಂದು ಸರಕಾರ ಹೇಳಿದೆ. ಆದರೆ ಇದಕ್ಕಾಗಿ ಬ್ಯಾಂಕಿ ನವರು ವಿಧಿಸಿರುವ ಮಾನದಂಡ, ಷರತ್ತುಗಳನ್ನು ಈಡೇರಿಸುವುದು ಭಾರೀ ತಾಪತ್ರಯದ ಕೆಲಸ ಎಂದು ಮದುವೆ ಹಣಕ್ಕಾಗಿ ಬ್ಯಾಂಕುಗಳಿಗೆ ಅಲೆದಾಡಿ ಸುಸ್ತಾದವರು ಹೇಳುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಮದುವೆಗಾಗಿ ಹಣ ವಾಪಸು ಪಡೆಯುವ ನಿಟ್ಟಿನಲ್ಲಿ ವಿವರವಾದ ಮಾರ್ಗದರ್ಶಿ ಸೂತ್ರವನ್ನು ಸೋಮವಾರ ಬ್ಯಾಂಕ್‌ಗಳಿಗೆ ಕಳುಹಿಸಿದೆ. ನ.8ಕ್ಕೆ ಮುಂಚೆ ಖಾತೆಯಲ್ಲಿ ಇದ್ದ ಹಣದ ಮೊತ್ತವನ್ನು ಮಾತ್ರ ಪಡೆಯಲು ಸಾಧ್ಯ. ಅಲ್ಲದೆ ಡಿ.30ರ ಒಳಗೆ ನಡೆಯುವ ಮದುವೆ ಸಮಾರಂಭಗಳಿಗೆ ಮಾತ್ರ ಈ 2.5 ಲಕ್ಷ ಹಣ ಪಡೆಯುವ ನಿಯಮ ಅನ್ವಯಿಸುತ್ತದೆ. ಈ ನಿಯಮದ ತಾಪತ್ರಯ ಗಮನಿಸಿ ಕೆಲವೊಂದು ರಿಯಾಯಿತಿ ನೀಡಲಾಗಿದೆ. ಅದರಂತೆ 10 ಸಾವಿರ ರೂ. ಮಿಕ್ಕಿದ ಹಣ ಖರ್ಚಾಗುವ ಬಗ್ಗೆ ಹೇಳಿಕೆ ನೀಡಬೇಕು. 2.5 ಲಕ್ಷ ಪಡೆದ ಬಳಿಕ ಅವನ್ನು ಹೇಗೆ ಖರ್ಚು ಮಾಡುತ್ತೇನೆ, ಯಾವ ವೆಚ್ಚಕ್ಕೆ ಎಷ್ಟು ಮೊತ್ತ ಎಂಬುದನ್ನು ಗ್ರಾಹಕ ಘೋಷಿಸಬೇಕು. ಹಣ ಪಡೆದ ಬಳಿಕ ಅವನ್ನು ಯಾರಿಗೆ ಪಾವತಿಸಲಾಗುತ್ತದೆಯೋ ಅವರ ಬಗ್ಗೆ ವಿವರ ನೀಡಬೇಕು (ಶಾಮಿಯಾನ, ಅಡುಗೆ ವೆಚ್ಚ ಇತ್ಯಾದಿ). ಜೊತೆಗೆ ಹೀಗೆ ಹಣ ಸ್ವೀಕರಿಸುವವರು ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ಘೋಷಣಾ ಪತ್ರ ನೀಡಬೇಕು. ಸುರೇಶ್ ಕುಮಾರ್ ಎಂಬವರ ಮಗಳಿಗೆ ಡಿ.4ರಂದು ವಿವಾಹ ನಿಶ್ಚಯವಾಗಿದೆ. ಮದುವೆ ಖರ್ಚಿಗೆ 2.5 ಲಕ್ಷ ಹಣ ಪಡೆಯಲು ಮಗಳ ಮದುವೆ ಆಹ್ವಾನಪತ್ರಿಕೆಯೊಂದಿಗೆ ಸರದಿ ಸಾಲಿನಲ್ಲಿ ಕೆಲ ಗಂಟೆ ನಿಂತ ಬಳಿಕ ಇವರ ಸರದಿ ಬಂದಿದೆ. ಆಗ ಬ್ಯಾಂಕಿನವರು ಹಣ ಪಾವತಿಸುವವರ ವಿವರ, ಘೋಷಣಾ ಪತ್ರ ಇತ್ಯಾದಿ ಒದಗಿಸಿದರೆ ಮಾತ್ರ ಹಣ ನೀಡುತ್ತೇವೆ ಎಂದಾಗ ಅವರು ನಿರಾಶೆಯಿಂದ ಮರಳಿದ್ದಾರೆ.ಮದುವೆ ವೆಚ್ಚದ ಹಣ ಸ್ವೀಕರಿಸುವ ಅಷ್ಟೂ ಮಂದಿಯಿಂದ ಘೋಷಣಾ ಪತ್ರ ತರುವುದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲದ ವಿಚಾರ. ಆದ್ದರಿಂದ ಬ್ಯಾಂಕಿನಿಂದ ಹಣ ಪಡೆಯುವ ಉಸಾಬರಿಯೇ ಬೇಡ ಎಂದುಕೊಂಡಿದ್ದೇನೆ ಎನ್ನುತ್ತಾರೆ ಅವರು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಗ್ರಾಹಕರೋರ್ವರು ಮದುವೆ ಉದ್ದೇಶಕ್ಕಾಗಿ 2.5 ಲಕ್ಷ ಹಣ ಪಡೆಯುವ ನಿಟ್ಟಿನಲ್ಲಿ ಎಲ್ಲಾ ದಾಖಲೆ ಪತ್ರ ಸಿದ್ಧಪಡಿಸಿಕೊಂಡು ಬ್ಯಾಂಕಿಗೆ ಬಂದಿದ್ದಾರೆ. ಇನ್ನೇನು ಹಣ ಸಿಕ್ಕಿಯೇ ಬಿಟ್ಟಿತು ಎಂಬಷ್ಟರಲ್ಲಿ ಇವರ ದುರದೃಷ್ಟ. ಇವರ ಖಾತೆಗೆ ಹಣ ಜಮೆಯಾಗಿದ್ದು ನ.10ರಂದು. ಈ ನಿಯಮದ ಪ್ರಕಾರ ನ.8ರ ಬಳಿಕ ಖಾತೆಗೆ ಹಣ ಜಮೆಯಾಗಿದ್ದರೆ ಏಕಕಾಲದಲ್ಲಿ 2.5 ಲಕ್ಷ ರೂ. ವಾಪಸು ಪಡೆಯುವಂತಿಲ್ಲ. ದುಡ್ಡಿದ್ದೂ ಹಣ ಮದುವೆಗೆ ಹಣ ಹೊಂದಿಸುವ ಚಿಂತೆಯಲ್ಲಿದ್ದಾರೆ ಈ ಗ್ರಾಹಕರು. ದೇಶದಾದ್ಯಂತ ಹಲವು ಗ್ರಾಹಕರು ಇದೇ ಸಮಸ್ಯೆ ಎದುರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.





