ಮದುವೆಯ ಕರೆಯೋಲೆಯಲ್ಲಿ ಪ್ರಧಾನಿ ಹೆಸರನ್ನು ತಪ್ಪಾಗಿ ಮುದ್ರಿಸಿದ್ದ ಯುವರಾಜ್!

ಹೊಸದಿಲ್ಲಿ, ನ.24: ಕ್ರಿಕೆಟಿಗ ಯುವರಾಜ್ ಸಿಂಗ್ ಗುರುವಾರ ತನ್ನ ತಾಯಿಯೊಂದಿಗೆ ಸಂಸತ್ ಭವನಕ್ಕೆ ಆಗಮಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ನೀಡಿದರು.
ಯುವರಾಜ್ ನ.30 ರಂದು ಚಂಡೀಗಢದಲ್ಲಿ ರೂಪದರ್ಶಿ ಹಾಗೂ ನಟಿ ಹ್ಯಾಝೆಲ್ ಕೀಚ್ ಅವರನ್ನು ಕೈ ಹಿಡಿಯಲಿದ್ದಾರೆ. ಈ ಜೋಡಿ ಎಪ್ರಿಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಎಡಗೈ ದಾಂಡಿಗ ಯುವರಾಜ್ ಪ್ರಧಾನಿಗೆ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿಯ ಹೆಸರನ್ನು ತಪ್ಪಾಗಿ ಮುದ್ರಿಸಿ ಎಡವಟ್ಟು ಮಾಡಿದ್ದಾರೆ. ಆಹ್ವಾನ ಪತ್ರಿಕೆಯ ಕವರ್‌ನಲ್ಲಿ ನರೇಂದ್ರ ಮೋದಿ ಬದಲಿಗೆ ‘ನರೇಂದರ್ ಮೋದಿ’ ಎಂದು ಮುದ್ರಿಸಲಾಗಿತ್ತು. ಮದುವೆ ಪತ್ರಿಕೆ ಈಗಾಗಲೆ ಪ್ರಧಾನಿಯ ಕೈ ಸೇರಿರುವ ಕಾರಣ ತಪ್ಪನ್ನು ಸರಿಪಡಿಸಲು ಸಮಯ ಮೀರಿ ಹೋಗಿದೆ.
ನ.30 ರಂದು ಸಾಂಪ್ರದಾಯಿಕ ಗುರುದ್ವಾರ ವಿವಾಹ ನಡೆಯಲಿದೆ. ಡಿ.2ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಮತ್ತೊಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯುವಿ ಸ್ನೇಹಿತರು ಹಾಗೂ ಭಾರತೀಯ ಕ್ರಿಕೆಟ್ ತಂಡದ ಸಹೋದ್ಯೋಗಿಗಳು ಸಹಿತ ಕೇವಲ 60 ಮಂದಿ ಅತಿಥಿಗಳು ಭಾಗವಹಿಸಲಿದ್ದಾರೆ.
ಸಂಗೀತ ಹಾಗೂ ರಿಸೆಪ್ಶನ್ ಡಿ.5 ಹಾಗೂ 7 ರಂದು ದಿಲ್ಲಿಯಲ್ಲಿ ನಡೆಯಲಿದೆ. ಸಂಗೀತ ಕಾರ್ಯಕ್ರಮ ಯುವರಾಜ್ ಫಾರ್ಮ್ ಹೌಸ್‌ನಲ್ಲಿ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮ ನಗರದ ಹೊಟೇಲ್‌ನಲ್ಲಿ ನಿಗದಿಪಡಿಸಲಾಗಿದೆ.





