ಒಬ್ಬ ವ್ಯಕ್ತಿಯಿಂದ ದೇಶದ ವಿಕಾಸ ಸಾಧ್ಯವಿಲ್ಲ: ನ್ಯಾ.ಭೀಮನಗೌಡ ಕೆ.ನಾಯಿಕ
ಶಿವಮೊಗ್ಗ, ನ. 24: ಯಾವುದೇ ಒಬ್ಬ ವ್ಯಕ್ತಿಯಿಂದ ದೇಶದ ವಿಕಾಸ ಸಾಧ್ಯವಿಲ್ಲ. ದೇಶದ ಉನ್ನತಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಭಾಗವಹಿಸುವಿಕೆ ಬಹುಮುಖ್ಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ-ಐಕ್ಯತೆ ನಿರ್ಮಿಸಲು ಸಾಧ್ಯವಾಗಲಿದೆ. ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು ಹಾಗೂ ಸಮಾನ ರಕ್ಷಣೆ ಹೊಂದಿದ್ದಾರೆ. ಎಲ್ಲರೂ ಸಂವಿಧಾನದತ್ತವಾಗಿ ನೀಡಿರುವ ಹಕ್ಕುಗಳನ್ನು ಉಪಯೋಗಿಸಿಕೊಳ್ಳುವಂತೆಯೇ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೀಮನಗೌಡ ಕೆ.ನಾಯಿಕ ಅವರು ಹೇಳಿದರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸ್ಥಳೀಯ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ರಾಷ್ಟ್ರನಿರ್ಮಾಣ, ಪ್ರಗತಿ ಹಾಗೂ ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಬಾಲ್ಯವಿವಾಹ ನಿಷೇಧ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅನೇಕ ಮತ, ಭಾಷೆ ಬಣ್ಣಗಳ ಜನರಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ವಿಶ್ವದ ಅತಿದೊಡ್ಡ ಹಾಗೂ ಯಶಸ್ವಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಾಷ್ಟ್ರ ಭಾರತ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ವಿಶಾಲಭಾವದಿಂದ ಐಕ್ಯತೆ ಸಾಧಿಸಿ, ಒಗ್ಗಟ್ಟಿನಿಂದ ದೇಶದ ರಕ್ಷಣೆ ಮತ್ತು ಪ್ರಗತಿಗೆ ಶ್ರಮಿಸಬೇಕು. ಆಗ ನೆರೆರಾಷ್ಟ್ರಗಳ ದುಷ್ಕೃತ್ಯಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ದೇಶವಾಸಿಗಳೆಲ್ಲರೂ ಇಲ್ಲಿರುವ ಸಂಪತ್ತನ್ನು ಬಳಸಿಕೊಂಡು ನೆಮ್ಮದಿಯ ಹಾಗೂ ಸ್ವಾವಲಂಬಿ ಜೀವನ ನಿರ್ವಹಿಸಬೇಕು ಎಂದವರು ನುಡಿದರು.
ಮಹಿಳೆಯರು ಪುರುಷರಷ್ಟೇ ಸಮನಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮಹಿಳೆಯರ ರಕ್ಷಣೆ ಮತ್ತು ಅವರ ಸರ್ವಾಂಗೀಣ ವಿಕಾಸಕ್ಕೆ ಅನೇಕ ಕಾನೂನುಗಳು ಅನುಷ್ಠಾನದಲ್ಲಿದ್ದರೂ ಕೌಟುಂಬಿಕ ನ್ಯಾಯಾಲಯದಲ್ಲಿ ಅನೇಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ವಿಕಾಸದಿಂದ ದೇಶದ ಉನ್ನತಿ ಸಾಧ್ಯ. ಸರಕಾರದಿಂದ ಅನೇಕ ಸೌಲಭ್ಯಗಳು ನೀಡುತ್ತಿದ್ದರೂ ಶೇ.10ರಷ್ಟು ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ ಎಂದ ಅವರು, ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ-ನೌಕರರು ತಮ್ಮ ಸೇವೆಯನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಅವರು ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದ ನಂತರವೂ ಬಾಲ್ಯವಿವಾಹಗಳು ಅವ್ಯಾಹತವಾಗಿ ನಡೆಯುತ್ತಿರುವುದು ಬೇಸರ ಸಂಗತಿ ಎಂದ ಅವರು, ಬಾಲ್ಯವಿವಾಹದಿಂದ ಪೋಷಕರು ಮಕ್ಕಳ ಬದುಕನ್ನು ಆಹುತಿ ತೆಗೆದುಕೊಳ್ಳದಂತೆ ಪೋಷಕರಿಗೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ನೀಡಿದ ಸ್ಥಾನಮಾನಗಳ ಆಧಾರದ ಮೇಲೆ ಆ ದೇಶದ ಉನ್ನತಿ, ವಿಕಾಸವನ್ನು ಗುರುತಿಸಬಹುದಾಗಿದೆ ಎಂದರು.
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ನಿರ್ಲಕ್ಷಿಸುವಂತದ್ದಲ್ಲ ಎಂದ ಅವರು, ಮಹಿಳೆಯರೂ ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ, ದೇಶದ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆಯುವಂತಾಗಬೇಕು. ಪ್ರಸ್ತುತ ದೇಶದಲ್ಲಿ ಶಿಕ್ಷಣ ಕ್ಷೇತ್ರದ ವಿಕಾಸಕ್ಕೆ ಅತೀ ಹೆಚ್ಚು ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಅತೀ ಹೆಚ್ಚು ಪುರುಷರು ಉದ್ಯೋಗಾವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲದರಲ್ಲೂ ಸಮಾನತೆಯನ್ನು ಪ್ರತಿಪಾದಿಸುವ ಮಹಿಳೆಯರು ದೇಶದ ಉನ್ನತ ಸ್ಥಾನಮಾನಗಳನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ವಕೀಲರು ಹಾಗೂ ಮಧ್ಯಸ್ಥಿಕೆದಾರರಾದ ಶ್ಯಾಮಲಾಶಾಸ್ತ್ರಿ ಅವರು ವಿಶೇಷ ಉಪನ್ಯಾಸ ನೀಡಿದರು. ಈ ಸಂದಭರ್ದಲ್ಲಿ ಕೌಟುಂಬಿಕ ನ್ಯಾಯಾಧೀಶರಾದ ಕೆ.ಜಿ.ಶಾಂತಿ, ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿ ಗಂಗಾಬಾಯಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ದರ್ಶಿ ಸೋಮಶೇಖರ ಸಿ.ಬದಾಮಿ ಅವರು ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಚ್.ಕೃಷ್ಣಪ್ಪ ವಂದಿಸಿದರು.





