ಜೂನಿಯರ್ ಹಾಕಿ ವಿಶ್ವಕಪ್: ಹರ್ಜೀತ್ ಸಿಂಗ್ ಭಾರತದ ನಾಯಕ
ಹೊಸದಿಲ್ಲಿ, ನ.24: ಪಂಜಾಬ್‌ನ 20ರ ಹರೆಯದ ಹರ್ಜೀತ್ ಸಿಂಗ್ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನ್ನಾಗಿ ಮುನ್ನಡೆಸಲಿದ್ದಾರೆ. ಡಿಫೆಂಡರ್ ಡಿಪ್ಸನ್ ಟಿರ್ಕಿ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಹರ್ಜೀತ್ ಭಾರತದ ಯಶಸ್ಸಿಗೆ ಪ್ರಮುಖ ಕಾಣಿಕೆ ನೀಡಿದ್ದಾರೆ. ಕಳೆದ ತಿಂಗಳು ಸ್ಪೇನ್‌ನಲ್ಲಿ ನಡೆದ 4 ರಾಷ್ಟ್ರಗಳ ಆಹ್ವಾನಿತ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಿದ್ದು, ಆ ಟೂರ್ನಿ ಫೈನಲ್‌ನಲ್ಲಿ ಜರ್ಮನಿಯನ್ನು ಭಾರತ ಮಣಿಸಿತ್ತು.
ಈ ವರ್ಷಾರಂಭದಲ್ಲಿ ನಡೆದ ಹಾಕಿ ಇಂಡಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷದ ಉದಯೋನ್ಮುಖ ಪ್ರಶಸ್ತಿಗೆ ಭಾಜನರಾಗಿದ್ದರು. ಜೂನಿಯರ್ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಿಂಗ್ ಎಪ್ರಿಲ್‌ನಲ್ಲಿ ನಡೆದ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಭಾರತದ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದಿದ್ದರು.
ಈ ವರ್ಷ ಲಂಡನ್‌ನಲ್ಲಿ ನಡೆದ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತದ ಹಿರಿಯ ತಂಡದಲ್ಲಿ ಹರ್ಜೀತ್ ಸ್ಥಾನ ಪಡೆದಿದ್ದರು





