ಮಡಿಕೇರಿ: ನಕ್ಸಲ್ ವದಂತಿ ಪೊಲೀಸರಿಂದ ಕೂಂಬಿಂಗ್
ಮಡಿಕೇರಿ ನ.24: ಭಾಗಮಂಡಲ ವ್ಯಾಪ್ತಿಯಲ್ಲಿ ಕೆಲವು ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಗಳು ಸುಳಿದಾಡಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಭಾಗಮಂಡಲ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮ ಹಾಗೂ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದರು.
ಜಿಲ್ಲೆಗೆ ಮಕ್ಕಳ ಅಪಹರಣಕಾರರು ನುಸುಳಿದ್ದಾರೆ ಎನ್ನುವ ವದಂತಿಗಳು ಹರಡಿರುವ ಬೆನ್ನಲ್ಲೇ ಇದಕ್ಕೆ ಪುಷ್ಟಿ ನೀಡುವಂತೆ ಭಾಗಮಂಡಲ ಪ್ರಾಥಮಿಕ ಶಾಲಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಅಪರಿಚಿತರು ಎದುರಾಗಿ ಆತಂಕ ಸೃಷ್ಟಿಸಿದ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಅಪರಿಚಿತ ವ್ಯಕ್ತಿಗಳು ನಕ್ಸಲರು ಅಥವಾ ಮಕ್ಕಳ ಅಪಹರಣಕಾರರು ಇರಬಹುದೆಂದು ಪೊಲೀಸರ ಗಮನ ಸೆಳೆದ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಕೂಂಬಿಂಗ್ ಕಾರ್ಯಾಚರಣೆೆಗೆ ಸೂಚನೆ ನೀಡಿದ್ದರು. ಬುಧವಾರ ಸಂಜೆ ಮತ್ತು ಗುರುವಾರದಂದು ಕಾರ್ಯಾಚರಣೆ ನಡೆಸಿದರೂ ಅಪರಿಚಿತರು ಪತ್ತೆಯಾಗಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ. ಇದೊಂದು ವದಂತಿಯಂತೆ ಕಂಡು ಬರುತ್ತಿದೆಯಾದರೂ ಪೊಲೀಸರು ಕಟ್ಟೆಚ್ಚರ ವಹಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.





