ಮನೆಗೆ ನುಗ್ಗಿ ಹಲ್ಲೆ: ಅಪಾರ ವೌಲ್ಯದ ನಗ-ನಗದು ದರೋಡೆ
ಕುಶಾಲನಗರ, ನ.24: ಮನೆಯೊಂದಕ್ಕೆ ನುಗ್ಗಿದ ದರೋಡೆ ಕೋರರ ತಂಡವೊಂದು ಮನೆ ಮಾಲಕನಿಗೆ ಥಳಿಸಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾದ ಘಟನೆ ನಂಜರಾಯಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಎಚ್.ಬಿ. ಶಿವಕುಮಾರ್ (65)ಎಂಬವರ ಮನೆಗೆ ಬೆಳಗ್ಗೆ 7:20ರ ಸಮಯದಲ್ಲಿ ನುಗ್ಗಿದ ಸುಮಾರು 7ರಿಂದ 8ಮಂದಿಯಿದ್ದ ದರೋಡೆಕೋರರ ತಂಡ ಶಿವಕುಮಾರ್ ಹಾಗೂ ಅವರ ಸಹೋದರ ವಿಶ್ವನಾಥ್ ಎಂಬವರಿಗೆ ಥಳಿಸಿ, ಕೈಕಾಲು ಕಟ್ಟಿಹಾಕಿ ಮನೆಯಲ್ಲಿದ್ದ 7 ಲಕ್ಷ ರೂ. ನಗದು ಸೇರಿದಂತೆ ಅಂದಾಜು 50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದೆ.
ಬೆಳೆಗಾರರಾದ ಎಚ್.ಬಿ. ಶಿವಕುಮಾರ್ ಎಂಬವರು ಗುರುವಾರ ಬೆಳಗ್ಗೆ ಬೆಂಗಳೂರಿನ ಆಸ್ಪತ್ರೆಗೆ ತೆರಳಲು ತಯಾರಿ ನಡೆಸುತ್ತಿದ್ದರು. ಅದೇ ತೋಟದಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಚಿಕ್ಕಮ್ಮನ ಮಗ ವಿಶ್ವನಾಥ್ ಅದೇ ಸಂದರ್ಭ ಮನೆಗೆ ಆಗಮಿಸಿದ್ದರು. ಇದೇ ಸಂದರ್ಭ ಮನೆಯ ಸಮೀಪದ ತೋಟದೊಳಗೆ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರು ಮನೆಯತ್ತ ಆಗಮಿಸಿ ಇಬ್ಬರನ್ನೂ ಥಳಿಸಿ ಕೈಕಾಲುಕಟ್ಟಿ ಹಾಕಿ ಮುಖಕ್ಕೆ ಪ್ಲಾಸ್ಟರ್ ಸುತ್ತಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ.
ದೇವರ ಪೂಜೆಗೆ ಮನೆಯ ಆವರಣದಲ್ಲಿ ಹೂ ಕೊಯ್ಯತ್ತಿದ್ದ ವಿಶ್ವನಾಥ್ ಅವರಿಗೆ ಮಾರಕಾಯುಧದಿಂದ ಸೊಂಟದ ಕೆಳಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿ 17 ಸಾವಿರ ರೂ.ುನ್ನು ದೋಚಿದ್ದಾರೆ ಎಂದು ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ನಂತರ ಮನೆಯ ಹಿಂಭಾಗದ ಕೋಣೆಯೊಳಗೆ ತೆರಳಿದ ದರೋಡೆಕೋರರು ಒಳಗಿದ್ದ ಶಿವಕುಮಾರ್ ಅವರನ್ನು ಬೆದರಿಸಿದ ಗುಂಪು ಕೈಕಾಲು ಕಟ್ಟಿ, ಮುಖಕ್ಕೆ ಪ್ಲಾಸ್ಟರ್ ಸುತ್ತಿ ನೆಲದ ಮೇಲೆ ತಳ್ಳಿ ಹಣಕ್ಕಾಗಿ ಪೀಡಿಸಿದ್ದಾರೆ. ಮಲಗುವ ಕೋಣೆಯನ್ನು ಜಾಲಾಡಿ ಬೀರುವಿನಲ್ಲಿದ್ದ ಆಭರಣ ಹಾಗೂ ನಗದು ದೋಚಿದ್ದಾರೆ. ಬಳಿಕ ಮತ್ತೊಂದು ಹಳೆಯ ಟ್ರಂಕ್ ಪೆಟ್ಟಿಗೆ ಬೀಗ ನೀಡುವಂತೆ ಶಿವಕುಮಾರ್ ಅವರನ್ನು ಥಳಿಸಿ ಪೀಡಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭ ಬೆಂಗಳೂರಿಗೆ ತೆರಳುವ ನಿಟ್ಟಿನಲ್ಲಿ ಬಾಡಿಗೆ ಕಾರಿನೊಂದಿಗೆ ನೆರೆಮನೆಯ ಈಶ್ವರ್ ಎಂಬವರು ಆಗಮಿಸಿದಾಗ ಮನೆಯ ಮುಂಭಾಗ ಬೀಗ ಹಾಕಿರುವುದು ಗೋಚರಿಸಿದೆ. ಮನೆಯ ಹಿಂಭಾಗಕ್ಕೆ ತೆರಳಿದ ಅವರಿಗೆ ಬಂದೂಕು ತೋರಿಸಿ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಗಾಬರಿಗೊಂಡ ಅವರು, ಮನೆಯ ಕಾಂಪೌಂಡ್ ಹಾರಿ ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ದರೋಡೆಕೋರರು ಪರಾರಿಯಾಗಿದ್ದರು.
ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿ ಮಾಹಿತಿ ಕಳೆಹಾಕಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಿಂದಿಮಾತನಾಡುತ್ತಿದ್ದ ದರೋಡೆಕೋರರು
ಮನೆ ದರೋಡೆ ನಡೆಸಿದ ತಂಡದಲ್ಲಿ ಸುಮಾರು 7ರಿಂದ8 ಮಂದಿ ಇದ್ದರು ಎಂದು ಮಾಹಿತಿ ನೀಡಿರುವ ಎಚ್.ಬಿ. ಶಿವಕುಮಾರ್, ದರೋಡೆಕೋರ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದವರು ಮುಖಕ್ಕೆ ಮುಸುಕು ಹಾಕಿದ್ದರು. ಎಲ್ಲರೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ.





