ವಿದ್ಯುತ್ ಬಿಲ್ ಪಾವತಿ ಕೇಂದ್ರದಲ್ಲಿ 2,000 ರೂ.ನೋಟು ಸ್ವೀಕರಿಸಲು ನಿರಾಕರಣೆ
ಸಿಬ್ಬಂದಿ ವಿರುದ್ಧ ಮೇಲಧಿಕಾರಿಗೆ ದೂರು
ಬಂಟ್ವಾಳ, ನ. 24: ವಿದ್ಯುತ್ ಬಿಲ್ ಪಾವತಿಸುವ ಸಂದರ್ದಲ್ಲಿ 2000 ರೂ. ಮುಖಬೆಲೆಯ ಹೊಸ ನೋಟನ್ನು ಸ್ವೀಕರಿಸಲು ಬಿಲ್ ಪಾವತಿ ಕೇಂದ್ರದ ಸಿಬ್ಬಂದಿ ನಿರಾಕರಿಸಿರುವ ಘಟನೆ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯಲ್ಲಿ ನಡೆದಿದೆ.
ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯ ಶೇಖರ ಶೆಟ್ಟಿ ಎಂಬವರು ಗುರುವಾರ ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಗೆ ತೆರಳಿ ಬಿಲ್ ಪಾವತಿಸುವ ಸಂದರ್ದಲ್ಲಿ 2000 ರೂ. ಮುಖಬೆಲೆಯ ಹೊಸ ನೋಟು ನೀಡಿದ್ದಾರೆ. ಈ ವೇಳೆ ಅಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಹೊಸ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗ್ರಾಪಂ ಸದಸ್ಯ ಮೆಸ್ಕಾಂ ಸಿಬ್ಬಂದಿಯಲ್ಲಿ ವಿಚಾರಿಸಿದಾಗ 2000 ರೂ. ನೋಟಿನಿಂದ ಗೊಂದಲವಾಗಿದೆ. ಅಲ್ಲದೆ 2000 ರೂ.ನ ನಕಲಿ ನೋಟುಗಳು ಪತ್ತೆಯಾಗಿರುವುದರಿಂದ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಉತ್ತರ ನೀಡಿ ಉಡಾಪೆಯಿಂದ ವರ್ತಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಆರೋಪಿಸಿದ್ದಾರೆ.
ಈ ಸಿಬ್ಬಂದಿಯ ಈ ವರ್ತನೆ ಬಗ್ಗೆ ಅವರು ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರಿಗೆ ಲಿಖಿತ ದೂರು ನೀಡಿ, ವಿದ್ಯುತ್ ಬಿಲ್ ಸ್ವೀಕರಿಸುವ ಕೇಂದ್ರದಿಂದ ಅವರನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. 2000 ರೂ. ನೂತನ ನೋಟು ಸ್ವೀಕರಿಸದೇ ಇದ್ದಲ್ಲಿ ಕಚೇರಿ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.







