ಶಿವಮೊಗ್ಗ: ಮುಂದುವರಿದ ಕೆರೆ ಒತ್ತುವರಿ ಕಾರ್ಯಾಚರಣೆ

ಶಿವಮೊಗ್ಗ, ನ. 24: ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಶಿವಮೊಗ್ಗ ತಾಲೂಕು ಆಡಳಿತವು ಬುಧವಾರದಿಂದ ಆರಂಭಿಸಿರುವ ಸರಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರ ಕೂಡ ಮುಂದುವರಿದಿದೆ. ತಾಲೂಕಿನ ಬೇಡರಹೊಸಹಳ್ಳಿ ಹಾಗೂ ಗೋಂಧಿಚಟ್ನಳ್ಳಿ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಎರಡು ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡಿದೆ. ತಹಶೀಲ್ದಾರ್ ಸತ್ಯನಾರಾಯಣ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಬೇಡರ ಹೊಸಹಳ್ಳಿ ಗ್ರಾಮದಲ್ಲಿ ನಡೆದ ತೆರವು ಕಾರ್ಯಾಚರಣೆ ಪರಿಶೀಲನೆ ನಡೆಸಿ, ತಾಲೂಕು ಆಡಳಿತದ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿ ಹಿಂದಿರುಗಿದರು. 12 ಎಕರೆ ಒತ್ತುವರಿ: ಬೇಡರಹೊಸಹಳ್ಳಿ ಗ್ರಾಮದಲ್ಲಿ ಸುಮಾರು 18.32 ಎಕರೆ ವಿಸ್ತೀರ್ಣವಿರುವ ಕೆರೆಯ 12ಎಕರೆಯಷ್ಟು ಪ್ರದೇಶವನ್ನು ಸುಮಾರು 8 ರಿಂದ 9 ಜನರು ಒತ್ತುವರಿ ಮಾಡಿ ಭತ್ತ ಬೆಳೆಯುತ್ತಿದ್ದರು. ಕಳೆದ ಕೆಲ ವರ್ಷಗಳ ಹಿಂದೆಯೇ ಕೆರೆಯ ಪ್ರದೇಶ ಒತ್ತುವರಿ ಮಾಡಲಾಗಿತ್ತಾದರೂ ತೆರವಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ಗುರುವಾರ ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ತಾಲೂಕು ಆಡಳಿತದ ಅಧಿಕಾರಿಗಳು ಒತ್ತುವರಿಯಾಗಿದ್ದ ಕೆರೆಯ ಪ್ರದೇಶ ಸಂರಕ್ಷಣೆಗೆ ಮುಂದಾದರು. ಇದಕ್ಕೆ ಒತ್ತುವರಿದಾರರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಆದರೆ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿ ಬೆಳೆದಿದ್ದ ಭತ್ತದ ಬೆಳೆ ತೆಗೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಿದರು. ಕೆರೆಯ ವಿಸ್ತೀರ್ಣ, ಗಡಿ ಗುರುತಿಸುವ ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಕೆರೆಯ ಪ್ರದೇಶದ ಸುತ್ತಲೂ ಜೆಸಿಬಿಯ ಮೂಲಕ ಗುಂಡಿ ತೆಗೆಸಿ ಮುಂದಿನ ದಿನಗಳಲ್ಲಿ ಕೆರೆಯ ಪ್ರದೇಶ ಮತ್ತೆ ಒತ್ತುವರಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.
ತೆರವು: ಮಧ್ಯಾಹ್ನ ಗೋಂಧಿಚಟ್ನಳ್ಳಿ ಗ್ರಾಮದಲ್ಲಿರುವ ಸರ್ವೇ ನಂಬರ್ 53 ರಲ್ಲಿರುವ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾಲೂಕು ಅಧಿಕಾರಿಗಳ ತಂಡ ನಡೆಸಿತು. ಸುಮಾರು 33 ಎಕರೆ ವಿಸ್ತೀರ್ಣ ಇರುವ ಕೆರೆಯ ಪ್ರದೇಶದಲ್ಲಿ ಏಳೆಂಟು ಜನರು ಐದಾರು ಎಕರೆಯಷ್ಟು ಭಾಗವನ್ನು ಅತಿಕ್ರಮಿಸಿ ಸಾಗುವಳಿ ಮಾಡುತ್ತಿದ್ದರು. ಪೊಲೀಸ್ ಪಹರೆಯಲ್ಲಿ ಈ ಕೆರೆಯ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು ಕೆರೆ ಪ್ರದೇಶದ ಸರ್ವೇ ನಡೆಸಿ, ಗಡಿ ಗುರುತಿಸಿ ಸುತ್ತಲೂ ಜೆಸಿಬಿ ಮೂಲಕ ಗುಂಡಿ ತೆಗೆದು ಸಂರಕ್ಷಣೆಯ ಕೆಲಸ ಮಾಡಿದರು.
ನಿರಂತರ ಕಾರ್ಯಾಚರಣೆ
ಜಿಲ್ಲೆಯಾದ್ಯಂತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಕುರಿತಂತೆ ಎಲ್ಲ ತಾಲೂಕು ಆಡಳಿತಗಳಿಗೂ ಕಟ್ಟುನಿಟ್ಟಿನ ಸೂಚನೆ ರವಾನಿಸಿರುವ ಜಿಲ್ಲಾಡಳಿತ, ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಕಾಲಮಿತಿಯಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯಬಾರದು. ಅಗತ್ಯವಾದರೆ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು. ವಾರದಲ್ಲಿ ಕನಿಷ್ಠ ಪಕ್ಷ ಎರಡು ದಿನಗಳ ಕಾಲ ಕೆರೆ ಒತ್ತುವರಿ ಕಾರ್ಯಾಚರಣೆ ನಡೆಸುವಂತೆ ತಾಲೂಕು ಆಡಳಿತಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.





