ಮೂರನೆ ಟೆಸ್ಟ್: ಪ್ಲೆಸಿಸ್ ಶತಕ;ಸುಸ್ಥಿತಿಯಲ್ಲಿ ದಕ್ಷಿಣ ಆಫ್ರಿಕ

ಅಡಿಲೇಡ್(ಆಸ್ಟ್ರೇಲಿಯ): ನ.24: ಚೆಂಡು ವಿರೂಪ ವಿವಾದದ ಹೊರತಾಗಿಯೂ ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿದ ನಾಯಕ ಎಫ್‌ಡು ಪ್ಲೆಸಿಸ್ ದಕ್ಷಿಣ ಆಫ್ರಿಕ ತಂಡ ಗುರುವಾರ ಇಲ್ಲಿ ಆರಂಭವಾದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ಎರಡನೆ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಐಸಿಸಿಗೆ ದಂಡ ಪಾವತಿಸಿದ್ದ ಪ್ಲೆಸಿಸ್ ಇಲ್ಲಿ ಗುರುವಾರ ಆರಂಭವಾದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 5ನೆ ಬ್ಯಾಟ್ಸ್‌ಮನ್ ಆಗಿ ಬ್ಯಾಟಿಂಗ್‌ಗೆ ಇಳಿದಾಗ ನೆರೆದಿದ್ದ ಆಸ್ಟ್ರೇಲಿಯ ಪ್ರೇಕ್ಷಕರಿಗೆ ಅಪಹಾಸ್ಯಕ್ಕೀಡಾದರು.
ಎಲ್ಲ ಅವಮಾನವನ್ನು ಸಹಿಸಿಕೊಂಡು ತಾಳ್ಮೆಯಿಂದ ಬ್ಯಾಟಿಂಗ್‌ಮಾಡಿದ ಪ್ಲೆಸಿಸ್ 164 ಎಸೆತಗಳಲ್ಲಿ 17 ಬೌಂಡರಿಗಳನ್ನು ಬಾರಿಸಿ ಅಜೇಯ 118 ರನ್ ಗಳಿಸಿದರು. ತಂಡ 95 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಇಳಿದ ಪ್ಲೆಸಿಸ್ ಏಕಾಂಗಿಯಾಗಿ ತಂಡದ ಮೊತ್ತವನ್ನು 259ಕ್ಕೆ ತಲುಪಿಸಿದರು.
ಪ್ಲೆಸಿಸ್ ಅಡಿಲೇಡ್ ಮೈದಾನದಲ್ಲಿ ಮತ್ತೊಂದು ನಿರ್ಣಾಯಕ ಇನಿಂಗ್ಸ್ ಆಡಿದರು. ನಾಲ್ಕು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ 376 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ಗೆಲುವನ್ನು ನಿರಾಕರಿಸಿದ್ದರು. ಜೋಸ್ ಹೇಝಲ್‌ವುಡ್ ಎಸೆತದಲ್ಲಿ 2 ಬೌಂಡರಿ ಬಾರಿಸಿದ ಪ್ಲೆಸಿಸ್ 147 ಎಸೆತಗಳಲ್ಲಿ ಆರನೆ ಶತಕ ಬಾರಿಸಿದರು.
ಆಸ್ಟ್ರೇಲಿಯ ಬೌಲರ್‌ಗಳ ಪೈಕಿ ಹೇಝಲ್‌ವುಡ್(4-68) ಯಶಸ್ವಿ ಬೌಲರ್ ಎನಿಸಿಕೊಂಡರು. ಆಫ್ರಿಕದ ಆರಂಭಿಕ ದಾಂಡಿಗ ಸ್ಟೀವ್ ಕುಕ್(40) ಮಾತ್ರ ಪ್ಲೆಸಿಸ್‌ಗೆ ಸಾಥ್ ನೀಡಿದರು. ಕಳೆದೆರಡು ಪಂದ್ಯಗಳಲ್ಲಿ 84, 64, 104 ರನ್ ಗಳಿಸಿದ್ದ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್ 33 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕ 76 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದ ತಕ್ಷಣ ಪ್ಲೆಸಿಸ್ ಇನಿಂಗ್ಸ್ ಡಿಕ್ಲೇರ್ ಮಾಡುವ ಧೈರ್ಯ ತೋರಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ದಿನದಾಟದಂತ್ಯಕ್ಕೆ 12 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿತು. ಡೇವಿಡ್‌ವಾರ್ನರ್‌ಗೆ ಇನಿಂಗ್ಸ್ ಆರಂಭಿಸಲು ಸಾಧ್ಯವಾಗದ ಕಾರಣ ಉಸ್ಮಾನ್ ಖ್ವಾಜಾ ಹಾಗೂ ರೆನ್‌ಶಾ(ಅಜೇಯ 8) ಇನಿಂಗ್ಸ್ ಆರಂಭಿಸಿದರು.
ಇಂಗ್ಲೆಂಡ್ ಮೂಲದ ಮ್ಯಾಟ್ ರಾನ್‌ಶಾ ತನ್ನ ಚೊಚ್ಚಲ ಪಂದ್ಯದಲ್ಲಿ 34 ಎಎಸತಗಳಲ್ಲಿ 8 ರನ್ ಗಳಿಸಿ ಎಚ್ಚರಿಕೆಯ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸ್ಕೋರ್ ವಿವರ
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್:
ಡಿಕ್ಲೇರ್
(ಎಫ್‌ಡು ಪ್ಲೆಸಿಸ್ ಅಜೇಯ 118, ಕುಕ್ 40, ಡಿ ಕಾಕ್ 24, ಹೇಝಲ್‌ವುಡ್ 4-68, ಸ್ಟಾರ್ಕ್ 2-78, ಬರ್ಡ್ 2-57)
ಆಸ್ಟ್ರೇಲಿಯ ಮೊದಲ ಇನಿಂಗ್ಸ್:
ವಿಕೆಟ್ ನಷ್ಟವಿಲ್ಲದೆ 14
(ಖ್ವಾಜಾ ಅಜೇಯ 3, ರೆನ್‌ಶಾ ಅಜೇಯ 08)
111111111







