ಕಾರವಾರ: ವಾಣಿಜ್ಯ ಬಂದರಿನ ಎರಡನೆ ಹಂತದ ವಿಸ್ತರಣೆ
ಕಾರವಾರ, ನ.24: ಇಲ್ಲಿನ ವಾಣಿಜ್ಯ ಬಂದರಿನ ಎರಡನೆ ಹಂತದ ವಿಸ್ತರಣೆಗಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದು, ಅದರ ಭಾಗವಾಗಿ ಸಮುದ್ರದ ಆಳದಲ್ಲಿರುವ ಮರಳು ಹಾಗೂ ಬಂಡೆಗಲ್ಲುಗಳ ಸ್ವರೂಪವನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಪ್ರಾರಂಭವಾಗಿದೆ. ನೈಸರ್ಗಿಕ ವಾಣಿಜ್ಯ ಬಂದರನ್ನು ಅಭಿವೃದ್ಧಿ ಪಡಿಸಿ, ಆದಾಯವನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಬಂದರಿನ ಎರಡನೆ ಹಂತದ ವಿಸ್ತರಣೆಗೆ ಬಂದರು ಇಲಾಖೆ ಮುಂದಾಗಿದೆ. ರವೀಂದ್ರನಾಥ ಕಡಲತೀರದ ಮಕ್ಕಳ ಉದ್ಯಾನವನದ ದಂಡೆಯ ವೀಕ್ಷಣಾ ಗೋಪುರದಿಂದ ಸಮುದ್ರದ ಉತ್ತರ ಭಾಗಕ್ಕೆ 1,160 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಸಮುದ್ರದಡಿಯ ಆಳದ ಗಟ್ಟಿಕಲ್ಲಿನ ಪದರ ಹುಡುಕುವ ಸಮೀಕ್ಷೆಯನ್ನು ಮುಂಬೈನ ಪುಗ್ರೋ ಜಿಯೋ ಟೆಕ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಕೈಗೊಂಡಿದೆ. ಪ್ರತಿ 250 ಮೀಟರ್‌ಗೆ ಒಂದರಂತೆ ಹೈಡ್ರೋಲಿಕ್ ಜಾಕ್‌ಅಪ್ ಬೋರ್ ಕೊರೆದು, ಗಟ್ಟಿ ಕಲ್ಲಿನ ಪದರ ಹುಡು
ಕಲಿದೆ. ಒಟ್ಟು ಸಮುದ್ರದಲ್ಲಿ ಉತ್ತರ ಭಾಗಕ್ಕೆ 7 ಬೋರ್ ಕೊರೆದು ಸಮುದ್ರದಡಿಯ ಮಣ್ಣಿನ ಮತ್ತು ಕಲ್ಲಿನ ಪದರ ಹಾಗೂ ಬಂಡೆಗಲ್ಲಿನ ಸ್ವರೂಪ ಹಾಗೂ ಎಷ್ಟು ಆಳದ ವರೆಗೆ ಗಟ್ಟಿಶಿಲೆ ಸಿಗಲಿದೆ ಎಂಬುದನ್ನು ಪತ್ತೆ ಹಚ್ಚಿ ಬಂದರು ಇಲಾಖೆಗೆ ಶೋಧನಾ ವರದಿ ಸಲ್ಲಿಸಲಿದೆ. ಈಗಾಗಲೇ ಬಂದರು ಅಲೆ ತಡೆಗೋಡೆ ಇರುವ ದಕ್ಷಿಣ ಭಾಗದಲ್ಲಿ ಸಮುದ್ರದಡಿಯ ತಳದ ಮಣ್ಣು ಮತ್ತು ಶಿಲೆ ಸಮೀಕ್ಷಾ ಕಾರ್ಯ ಮುಗಿದಿದೆ. ದಕ್ಷಿಣಕ್ಕೆ 250 ಮೀಟರ್ ಅಲೆ ತಡೆಗೋಡೆ ಈಗಾಗಲೇ ಇದ್ದು, ಅದನ್ನೂ 145 ಮೀಟರ್ ವರೆಗೆ ವಿಸ್ತರಿಸುವ ಯೋಜನೆ ಹೊಂದಿದೆ. ದಕ್ಷಿಣ ಅಲೆ ತಡೆಗೋಡೆ ಬಳಿ 9.3 ಮೀಟರ್ ಆಳದಲ್ಲಿ ಗಟ್ಟಿಶಿಲೆ ಪತ್ತೆಯಾಗಿದೆ. ಉತ್ತರ ಭಾಗದ ಸಮುದ್ರದ ತಳದ ಮಣ್ಣು ಮತ್ತು ಶಿಲೆ ಸ್ವರೂಪದ ಸಮೀಕ್ಷೆ ಕಾರ್ಯ ಸಾಗಿದೆ. 1,160 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯವಾದ ಗಟ್ಟಿ ಶಿಲೆ ಹಾಗೂ ಮರಳಿನ ಆಳ ಹುಡುಕಲು 7 ಬೋರ್‌ವೆಲ್ ಕೊರೆಯಲು ಬಂದರು ಇಲಾಖೆ 77 ಲಕ್ಷ ರೂ. ಖರ್ಚು ಮಾಡಲಿದೆ. ಇದೀಗ ಪುಗ್ರೋ ಜಿಯೋ ಟೆಕ್ ಇಂಡಿಯಾ ಈ ಶೋಧನಾ ಕಾರ್ಯದಲ್ಲಿ ನಿರತವಾಗಿದೆ. ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರಕಾರ ಈಗಾಗಲೇ 125 ಕೋಟಿ ರೂ.ಯನ್ನು ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಅಲ್ಲದೆ ಯೋಜನೆಯ ಶೇ.30ರಷ್ಟು ಹಣ 43.6 ಕೋಟಿ ರೂ.ಯನ್ನು ಸಂಪುಟದ ಒಪ್ಪಿಗೆ ಪಡೆದ ಬಳಿಕ ಬಿಡುಗಡೆಯಾಗಲಿದೆ.





