ಮಲೇಷ್ಯಾವನ್ನು ಮಣಿಸಿದ ಭಾರತ
ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿ

ಮೆಲ್ಬೋರ್ನ್, ನ.24: ನಾಲ್ಕು ರಾಷ್ಟ್ರಗಳ ನಡುವಿನ ಆಹ್ವಾನಿತ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ 14ನೆ ರ್ಯಾಂಕಿನ ಮಲೇಷ್ಯಾವನ್ನು 4-2 ಗೋಲುಗಳ ಅಂತರದಿಂದ ಮಣಿಸಿತು.
ವಿಶ್ವದ ನಂ.1 ತಂಡ ಆಸ್ಟ್ರೇಲಿಯ ವಿರುದ್ಧ 2-3 ರಿಂದ ಸೋತ ಮರುದಿನ ನಡೆದ ಪಂದ್ಯದಲ್ಲಿ ವಿಆರ್ ರಘುನಾಥ್ ನಾಯಕತ್ವದ ಭಾರತ ತಂಡ ಕನ್ನಡಿಗ ನಿಕ್ಕಿನ್ ತಿಮ್ಮಯ್ಯ ಬಾರಿಸಿದ ಅವಳಿ ಗೋಲು(21,55ನೆ ನಿಮಿಷ), ರೂಪಿಂದರ್ ಪಾಲ್ ಸಿಂಗ್ (40ನೆ ನಿಮಿಷ) ಹಾಗೂ ಆಕಾಶ್‌ದೀಪ್ ಸಿಂಗ್(56ನೆ ನಿಮಿಷ) ದಾಖಲಿಸಿದ ತಲಾ ಒಂದು ಗೋಲುಗಳ ಸಹಾಯದಿಂದ ಮಲೇಷ್ಯಾವನ್ನು 4-2 ಅಂತರದಿಂದ ಮಣಿಸಿತು. ಭಾರತದ ಗೋಲ್‌ಕೀಪರ್ ಆಕಾಶ್ ಚಿಕ್ಟೆ ಅತ್ಯುತ್ತಮ ಪ್ರದರ್ಶನದಿಂದ ತಂಡದ ಗೆಲುವಿನಲ್ಲಿ ನೆರವಾದರು.
21ನೆ ನಿಮಿಷದಲ್ಲಿ ಗೋಲು ಬಾರಿಸಿದ ನಿಕ್ಕಿನ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 39ನೆ ನಿಮಿಷದಲ್ಲಿ ಗೋಲು ಬಾರಿಸಿದ ಫೈಝಲ್ ಗೋಲನ್ನು 1-1 ರಿಂದ ಸಮಬಲಗೊಳಿಸಿದರು. 40ನೆ ನಿಮಿಷದಲ್ಲಿ ಗೋಲು ಬಾರಿಸಿದ ರೂಪಿಂದರ್ ಏಷ್ಯನ್ ಚಾಂಪಿಯನ್ ಭಾರತ ತಿರುಗೇಟು ನೀಡಲು ನೆರವಾದರು. 47ನೆ ನಿಮಿಷದಲ್ಲಿ ಶಹ್ರಿಲ್ ಸಾಬನ್ ಪೆನಾಲ್ಟಿ ಕಾರ್ನರ್‌ನ ಮೂಲಕ ಮಲೇಷ್ಯದ ಪರ ಎರಡನೆ ಗೋಲು ಬಾರಿಸಿದ್ದರು.
ಸತತ ಗೋಲು ಬಾರಿಸಿದ ನಿಕ್ಕಿನ್ ತಿಮ್ಮಯ್ಯ(55ನೆ ನಿಮಿಷ) ಹಾಗೂ ಆಕಾಶ್‌ದೀಪ್ ಸಿಂಗ್(56ನೆ ನಿ.) ಭಾರತಕ್ಕೆ 4-2 ಅಂತರದ ಗೆಲುವು ತಂದುಕೊಟ್ಟರು.
ಮಲೇಷ್ಯಾಕ್ಕೆ 11ನೆ ನಿಮಿಷದಲ್ಲಿ ಗೋಲು ಬಾರಿಸುವ ಉತ್ತಮ ಅವಕಾಶ ಒದಗಿಬಂದಿತ್ತು. ಗೋಲ್‌ಕೀಪರ್ ಆಕಾಶ್ ಚಿಕ್ಟೆ ಗೋಲನ್ನು ನಿರಾಕರಿಸಿದರು.
ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿರುವ ಭಾರತ ನ.26 ರಂದು ನಡೆಯಲಿರುವ ತನ್ನ ಮೂರನೆ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು ಎದುರಿಸಲಿದೆ.







