ಅಂಕೋಲಾ: ಬಾರ್ಜ್‌ನಲ್ಲಿ ನೀರು ತುಂಬಿ ಸಂಚಾರ ಸ್ಥಗಿತ
ಅಂಕೋಲಾ, ನ. 24: ತಾಲೂಕಿನ ಮಂಜಗುಣಿ ಮತ್ತು ನೆರೆಯ ಕುಮಟಾ ತಾಲೂಕಿನ ಗಂಗಾವಳಿ ನಡುವೆ ನದಿಯಲ್ಲಿ ಸಂಚರಿಸುವ ಬಾರ್ಜ್ ಬುಧವಾರ ಮಂಜಗುಣಿ ದಕ್ಕೆಯಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ನೀರು ತುಂಬಿಕೊಂಡಿದ್ದರಿಂದ ಗುರುವಾರ ಮಧ್ಯಾಹ್ನದವರೆಗೆ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿತ್ತು.
ಕೇವಲ 6 ತಿಂಗಳ ಹಿಂದೆ ರೂ. 1 ಕೋಟಿ 80 ಲಕ್ಷ ವೆಚ್ಚದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ತರಿಸಲಾಗಿರುವ ಈ ಹಡಗು 25 ಮೀ. ಉದ್ದ ಮತ್ತು 8 ಮೀ. ಅಗಲವಿದ್ದು, ಸುಮಾರು 50 ಟನ್ ಭಾರವನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಇದರ ನಿರ್ಮಾಣ ವ್ಯವಸ್ಥೆಯಲ್ಲಿನ ದೋಷದಿಂದಾಗಿ ತಳಭಾಗದಲ್ಲಿ ಭಾರೀ ಪ್ರಮಾಣದ ರಂಧ್ರವಾಗಿದ್ದರಿಂದ ನೀರು ತುಂಬಿಕೊಂಡಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದಾಗಿ ಪ್ರತಿನಿತ್ಯ ಎರಡು ತಾಲೂಕುಗಳ ಹತ್ತಾರು ಹಳ್ಳಿಗಳಿಂದ ಸಂಚರಿಸುವ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಬಾರ್ಜನಲ್ಲಿ ಸಂಚರಿಸುವ ಕುರಿತು ಕಳವಳ ಪಡುವಂತಾಗಿದೆ. ಘಟನೆಯ ಕುರಿತು ಕಾರವಾರ ಬಂದರು ಅಧಿಕಾರಿ ನಾರಾಯಣಪ್ಪ ಅವರನ್ನು ಪತ್ರಿಕೆ ಪ್ರಶ್ನಿಸಿದಾಗ ನನಗೆ ಈ ಕುರಿತು ಮಾಹಿತಿಯಿಲ್ಲ. ಗಂಗಾವಳಿ ಜಲಮಾರ್ಗದಲ್ಲಿ ಸಂಚರಿಸುವ ಬಾರ್ಜ್ ಉಸ್ತುವಾರಿ ಹೊನ್ನಾವರದ ಬಂದರು ಇಲಾಖೆ ಕಡವು ನಿರೀಕ್ಷಕ ಜಾನು ನಾಯ್ಕ ಎಂಬವವರಿಗೆ ಇರುತ್ತದೆ ಎಂದು ಜವಾಬ್ದಾರಿಯಿಂದ ನುಣುಚಿಕೊಂಡರು.
ಬಾರ್ಜ್‌ನಿಂದ ನೀರು ಖಾಲಿ: ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಂಪಸೆಟ್ ಬಳಸಿ ಬಾರ್ಜನಲ್ಲಿ ತುಂಬಿಕೊಂಡಿದ್ದ ನೀರನ್ನು ಬಾರ್ಜ್ ಸಿಬ್ಬಂದಿ ತೆರವುಗೊಳಿಸಿ ಇಂದಿನ ಮಟ್ಟಿಗೆ ಸಂಚಾರ ಪ್ರಾರಂಭಿಸಿದ್ದಾರೆ. ಸಣ್ಣ ಬಿರುಕೂ ಸಹ ಭಾರೀ ಹಡಗನ್ನು ಮುಳುಗಿಸಬಲ್ಲದು ಎಂಬಂತೆ ಬಾರ್ಜ್‌ನಲ್ಲಿ ಉಂಟಾಗಿರುವ ರಂಧ್ರವನ್ನು ಮತ್ತಿತರ ದೋಷಗಳನ್ನು ತಾಂತ್ರಿಕವಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯವರು ದುರಸ್ಥಿಪಡಿಸಿ ಈ ಮಾರ್ಗವಾಗಿ ಸಂಚರಿಸುವವರಿಗೆ ಭರವಸೆ ನೀಡಬೇಕು





