ಬ್ರಿಟನ್ ಮಾಧ್ಯಮ ವರದಿ ನಿರಾಕರಿಸಿದ ಅನಿಲ್ ಕುಂಬ್ಳೆ
ಕೊಹ್ಲಿ ವಿರುದ್ಧ ಚೆಂಡು ವಿರೂಪ ಆರೋಪ

ಮೊಹಾಲಿ, ನ.24: ಬ್ರಿಟನ್ ಮಾಧ್ಯಮ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಾಡಿರುವ ಚೆಂಡು ವಿರೂಪ ಆರೋಪವನ್ನು ಕೋಚ್ ಅನಿಲ್ ಕುಂಬ್ಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇಂತಹ ಕಟ್ಟುಕಥೆಗಳನ್ನು ನಂಬಲು ನಾನು ಸಿದ್ಧವಿಲ್ಲ. ಮಾಧ್ಯಮಗಳಲ್ಲಿ ವರದಿ ಯಾಗುವ ಯಾವುದೇ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಇಂತಹ ಸುದ್ದಿಗಳಿಗೆ ನಾವು ಹೆಚ್ಚು ಮಹತ್ವ ನೀಡುವುದು ಸರಿಯಲ್ಲ. ಬ್ರಿಟನ್ ಮಾಧ್ಯಮದ ವರದಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮಾಧ್ಯಮದಲ್ಲಿ ಏನೂ ಕೂಡ ಬರೆಯಬಹುದು, ಆರೋಪ ಮಾಡಬಹುದು. ನಮ್ಮ ತಂಡದ ಯಾವೊಬ್ಬ ಆಟಗಾರನು ಇಂತಹ ನಿಯಮಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಿನ್ ದಂತಕತೆ ಕುಂಬ್ಳೆ ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಚೆಂಡಿಗೆ ಸಿಹಿ ವಸ್ತುವನ್ನು ಲೇಪಿಸುತ್ತಿದ್ದ ದೃಶ್ಯವನ್ನು ಬ್ರಿಟನ್ ಟ್ಯಾಬ್ಲಾಯ್ಡಾ ಪ್ರಕಟಿಸಿತ್ತು. ಈ ಬಗ್ಗೆ ಇಂಗ್ಲೆಂಡ್ ತಂಡ ಅಥವಾ ಮ್ಯಾಚ್ ರೆಫರಿ ಐಸಿಸಿಗೆ ದೂರು ನೀಡಿಲ್ಲ. ಐಸಿಸಿ ನಿಯಮದ ಪ್ರಕಾರ ಘಟನೆ ನಡೆದ ಐದು ದಿನಗಳಲ್ಲಿ ದೂರು ಸಲ್ಲಿಸಬೇಕು.





