ಪತಂಜಲಿ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ
ಆನೆ ಸಾವು ಪ್ರಕರಣ

ಗುವಾಹಟಿ, ನ.24: ತೇಜ್‌ಪುರ ಎಂಬಲ್ಲಿರುವ ಬಾಬಾ ರಾಂದೇವ್ ಒಡೆತನದ ಪತಂಜಲಿ ಹರ್ಬಲ್ ಆ್ಯಂಡ್ ಮೆಗಾ ಫುಡ್‌ಪಾರ್ಕ್‌ನ ಯೋಜನಾ ಸ್ಥಳದಲ್ಲಿದ್ದ ಹೊಂಡಕ್ಕೆ ಬಿದ್ದಿದ್ದ ಹೆಣ್ಣಾನೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸುವಂತೆ ಅರಣ್ಯಾಧಿಕಾರಿಗೆ ಅಸ್ಸಾಂ ರಾಜ್ಯದ ಅರಣ್ಯ ಸಚಿವೆ ಪ್ರಮೀಳಾ ರಾಣಿ ಬ್ರಹ್ಮ ನಿರ್ದೇಶನ ನೀಡಿದ್ದಾರೆ.
10 ಅಡಿ ಆಳದ ಈ ಹೊಂಡಕ್ಕೆ ಮೊದಲು ಮರಿಯಾನೆಯೊಂದು ಬಿದ್ದಿತ್ತು. ಇದನ್ನು ರಕ್ಷಿಸಲು ಹೋದ ಹೆಣ್ಣಾನೆಯೂ ಕಾಲು ಜಾರಿ ಹೊಂಡಕ್ಕೆ ಬಿದ್ದಿತ್ತು. ಈ ವೇಳೆ ಆನೆಗಳ ಘೀಳಾಟ ಕಂಡು ಬಳಿಹೋದ ಬೃಹತ್ ಗಂಡಾನೆಯೊಂದು ಕೂಡಾ ಹೊಂಡಕ್ಕೆ ಬಿದ್ದಿದೆ. ಗಂಡಾನೆ ಆಯತಪ್ಪಿ ಹೆಣ್ಣಾನೆಯ ಮೇಲೆ ಬಿದ್ದ ಕಾರಣ ಹೆಣ್ಣಾನೆಯ ತಲೆಗೆ ಗಂಭೀರ ಗಾಯವಾಗಿದ್ದು ಒಂದು ಕಾಲು ಮುರಿದಿದೆ. ಗಂಡಾನೆ ಹೊಂಡದಿಂದ ಮೇಲೆ ಬರಲು ಸಫಲವಾಗಿದೆ.
ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮರಿಯಾನೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಆದರೆ ನೋವಿನಿಂದ ಸುಮಾರು ಒಂದು ಗಂಟೆ ಕಾಲ ಒದ್ದಾಡಿದ ಹೆಣ್ಣಾನೆ ಬಳಿಕ ಪ್ರಾಣಬಿಟ್ಟಿದೆ.
ಇದೊಂದು ದುರಂತ ಪ್ರಕರಣ. ಪತಂಜಲಿ ಸಂಸ್ಥೆಗೆ ನೀಡಿರುವ ಜಾಗ ಆನೆ ಕಾರಿಡಾರ್‌ಗೆ ಸೇರಿದ್ದು. ಇಲ್ಲಿ ನಿರಂತರವಾಗಿ ಆನೆಗಳು ಓಡಾಡುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ, ಇಲ್ಲಿ ಆಯುರ್ವೇದ ಕಾರ್ಖಾನೆ ಸ್ಥಾಪಿಸಲು ಮುಂದಾಗಿರುವ ಪತಂಜಲಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅರಣ್ಯ ಸಚಿವೆ ಪ್ರಮೀಳಾ ರಾಣಿ ಬ್ರಹ್ಮ ತಿಳಿಸಿದ್ದಾರೆ. ಅಲ್ಲದೆ ಅರಣ್ಯಪ್ರಾಣಿಗಳ ರಕ್ಷಣೆಯ ವಿಷಯದಲ್ಲಿ ಪತಂಜಲಿ ಸಂಸ್ಥೆಯ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷದ ವರ್ತನೆ ಖಂಡನೀಯ ಎಂದಿದ್ದಾರೆ.
ಹೊಂಡಕ್ಕೆ ಬಿದ್ದ ಮರಿಯಾನೆ ಮತ್ತದರ ತಾಯಿಯನ್ನು ಹೊರತೆಗೆಯಲು ಬೃಹತ್ ಗಾತ್ರದ ಕ್ರೇನ್‌ಗಳನ್ನು ಉಪಯೋಗಿಸಿದ ಅರಣ್ಯಾಧಿಕಾರಿಗಳು ಆನೆಗಳನ್ನು ಹೊರತೆಗೆದು ಕಾಝಿರಂಗದಲ್ಲಿರುವ ಅರಣ್ಯಪ್ರಾಣಿಗಳ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದರು. ಆದರೆ ತಲೆಗೆ ಬಿದ್ದ ಗಾಯದಿಂದ ಸೊಂಡಿಲಿನಿಂದ ರಕ್ತ ಒಸರುತ್ತಿದ್ದ ಹೆಣ್ಣಾನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ.
ಪತಂಜಲಿ ಸಂಸ್ಥೆಯ ಪರವಾಗಿ ಹೇಳಿಕೆ ನೀಡಿರುವ ಉದಯಾದಿತ್ಯ ಗೋಸ್ವಾಮಿ ಎಂಬವರು, ಕೈಗಾರಿಕಾ ಪಾರ್ಕ್ ಎಂದು 1990ರಲ್ಲಿ ಗುರುತಿಸಲಾಗಿರುವ ಈ ಸ್ಥಳವು ಆನೆ ಕಾರಿಡಾರ್ ಪ್ರದೇಶವಲ್ಲ. ಆದರೆ ಅರುಣಾಚಲ ಪ್ರದೇಶದಿಂದ ಬರುತ್ತಿರುವ ಆನೆಗಳು ಇಲ್ಲಿ ಬೆಳೆಗಳಿಗೆ ದಾಳಿ ಮಾಡುತ್ತಿವೆ. ಈ ಸಂದರ್ಭದಲ್ಲಿ ಅಚಾನಕ್ ಆಗಿ ಈ ಘಟನೆ ನಡೆದಿದೆ ಎಂದವರು ತಿಳಿಸಿದ್ದಾರೆ. ಅಸ್ಸಾಂ ಸರಕಾರವು ತೇಜ್‌ಪುರ ಸಮೀಪದ ಬಲಿಪಾರ ಎಂಬಲ್ಲಿ ಹರ್ಬಲ್ ಮತ್ತು ಮೆಗಾ ಫುಡ್‌ಪಾರ್ಕ್ ನಿರ್ಮಿಸಲು ಪತಂಜಲಿ ಸಂಸ್ಥೆಗೆ 150 ಎಕ್ರೆ ಜಮೀನು ಮಂಜೂರು ಮಾಡಿದೆ.





