ಫರಂಗಿಪೇಟೆ: ವಾಕಿಂಗ್ ಹೋಗುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ
ಬಂಟ್ವಾಳ, ನ.25: ವಾಯುವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರು ಅಪಘಾತಕ್ಕೆ ಬಲಿಯಾಗಿರುವ ಘಟನೆ ಪರಂಗಿಪೇಟೆ ಸಮೀಪದ ಹತ್ತನೇಮೈಲುಗಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸಂವಿಸಿದೆ.
ಹತ್ತನೇಮೈಲುಗಲ್ಲು ಮಸೀದಿ ಬಳಿಯ ನಿವಾಸಿ ಅಬೂಬಕ್ಕರ್ ಎಂಬವರ ಪತ್ನಿ ರುಕ್ಯಾ(45) ಮೃತಪಟ್ಟ ಮಹಿಳೆ. ಇವರು ಎಂದಿನಂತೆ ಬೆಳಗ್ಗೆ ಸಮಯದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ದಲ್ಲಿ ಅಪಘಾತ ಸಂವಿಸಿ ಮೃತಪಟ್ಟಿದ್ದಾರೆ.
ಮೃತ ಮಹಿಳೆ ಪ್ರತೀದಿನ ತನ್ನ ಮನೆ ಸಮೀಪ ಇನ್ನಿಬ್ಬರು ಮಹಿಳೆಯ ಜೊತೆಯಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದರು. ಇನ್ನಿಬ್ಬರು ಮಹಿಳೆಯರು ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯ ನಿವಾಸಿಗಳಾಗಿದ್ದರಿಂದ ಅವರ ಬಳಿಗೆ ತೆರಳಲು ಇಂದು ಬೆಳಗ್ಗೆ 5:45ರ ವೇಳೆಗೆ ರುಕ್ಯಾ ರಸ್ತೆ ದಾಟುತ್ತಿದ್ದ ಸಂದರ್ದಲ್ಲಿ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಮೀನು ಸಾಗಟದ ಪಿಕಪ್ ಜೀಪ್ ಢಿಕ್ಕಿ ಹೊಡೆದಿದೆ. ಅಪಘಾತದ ರಸಕ್ಕೆ ತೀವ್ರ ಸ್ವರೂಪದ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಜೀಪ್ ಚಾಲಕನಿಗೆ ಗೋಚರವಾಗಿಲ್ಲ ಎಂದು ತಿಳಿದು ಬಂದಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಮೆಲ್ಕಾರ್ ಮೂಲದ ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.