ದಿಲೀಪ್, ಕಾವ್ಯ ಮಾಧವನ್ ರಹಸ್ಯ ಮದುವೆ !

ಹೊಸದಿಲ್ಲಿ, ನ.25: ಮಲಯಾಳಂ ಚಿತ್ರರಂಗದ ಖ್ಯಾತ ನಟ ದಿಲೀಪ್ ಹಾಗೂ ನಟಿ ಕಾವ್ಯ ಮಾಧವನ್ ಕೊಚ್ಚಿಯಲ್ಲಿ ಇಂದು (ಶುಕ್ರವಾರ)ಕೆಲ ಆಯ್ದ ಆತಿಥಿಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ನಿಜ ಹೇಳಬೇಕೆಂದರೆ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟ ಅತಿಥಿಗಳಿಗೂ ಇಂದು ಮದುವೆ ನಡೆಯಲಿದೆಯೆಂದು ಗೊತ್ತಿರಲಿಲ್ಲ. ಅವರೆಲ್ಲರಿಗೂ ಚಿತ್ರವೊಂದರ ಸಂಬಂಧ ಪೂಜೆಗೆಂದು ಆಹ್ವಾನಿಸಲಾಗಿತ್ತು. ತಮ್ಮ ವಿವಾಹಕ್ಕಿಂತ ಮುಂಚೆಯೇ ಮಾಧ್ಯಮಗಳಲ್ಲಿ ಗಾಸಿಪ್ ಹರಿದಾಡದಂತೆ ತಡೆಯುವುದೇ ಜೋಡಿಯ ಉದ್ದೇಶವಾಗಿತ್ತೆನ್ನಲಾಗಿದೆ.
ಕೊಚ್ಚಿಯ ಹೊಟೇಲ್ ಒಂದರಲ್ಲಿ ಬೆಳಗ್ಗೆ 9 ಹಾಗೂ 10 ಗಂಟೆಯ ನಡುವೆ ನಡೆದ ಈ ವಿವಾಹ ಸಮಾರಂಭದಲ್ಲಿ ಸುಮಾರು 200 ಮಂದಿ ಅತಿಥಿಗಳು ಹಾಜರಿದ್ದರು. ವಿವಾಹ ನಡೆಯುವ ಮುಂಚೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡ ದಿಲೀಪ್ ತಮ್ಮ ವಿವಾಹದ ಬಗ್ಗೆ ಅಭಿಮಾನಿಗಳಲ್ಲಿ ಹೇಳಿಕೊಂಡರು. ‘‘ನಾನು ಇಂದು ವಿವಾಹವಾಗುತ್ತಿದ್ದೇನೆ. ಈ ವಿಚಾರವನ್ನು ನನ್ನ ಪುತ್ರಿ, ತಾಯಿ, ಸ್ನೇಹಿತರು ಹಾಗೂ ಕುಟುಂಬವರ್ಗದೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಮೇಲೆ ಅಭಿಮಾನವಿಟ್ಟ ಎಲ್ಲರೂ ನಮ್ಮನ್ನು ಹರಸುವರೆಂದು ನಂಬಿದ್ದೇನೆ. ನಮ್ಮ ಬಗ್ಗೆ ವಿವಾದಗಳನ್ನೆಬ್ಬಿಸಬೇಡಿ’’ ಎಂದು ಅವರು ಫೇಸ್ ಬುಕ್ ಲೈವ್ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.
ಹಲವಾರು ನಟ-ನಟಿಯರು ನಿರ್ದೇಶಕರು ಹಾಗೂ ನಿರ್ಮಾಪಕರು ಹಾಜರಿದ್ದು, ನವವಿವಾಹಿತ ದಂಪತಿಯನ್ನು ಹರಸಿದರು.
ಮಲಯಾಳಂ ಚಿತ್ರರಂಗದ ಖ್ಯಾತನಾಮರಾದ ಮಮ್ಮುಟ್ಟಿ, ಮೇನಕಾ, ಚಿಪ್ಪಿ ಹಾಗೂ ಜೋ ಮೋಲ್, ಜಯರಾಮ್, ನಾದಿರ್ ಶಾಹ್, ನಿರ್ದೇಶಕ ರಂಜಿತ್ ಹಾಜರಿದ್ದರು. ಹೆಚ್ಚಿನವರಿಗೆ ಈ ಸಮಾರಂಭಕ್ಕೆ ಗುರುವಾರ ಸಂಜೆಯಷ್ಟೇ ಆಮಂತ್ರಣ ನೀಡಲಾಗಿತ್ತು.
ನವವಿವಾಹಿತ ದಂಪತಿ ಶೀಘ್ರದಲ್ಲೇ ದುಬೈಗೆ ಪ್ರಯಾಣಿಸಲಿದ್ದಾರೆಂಬ ಬಗ್ಗೆ ಮಾಹಿತಿಯಿದೆ. ವಿವಾಹ ಆರತಕ್ಷತೆ ಸಮಾರಂಭ ಯಾವಾಗ ನಡೆಯುವುದೆಂದು ಇನ್ನಷ್ಟೇ ತಿಳಿಯಬೇಕಿದೆ.
ಮಲಯಾಳಂ ಚಿತ್ರರಂಗದ ಖ್ಯಾತ ಆನ್-ಸ್ಕ್ರೀನ್ ಜೋಡಿಯಾಗಿರುವ ದಿಲೀಪ್, ಕಾವ್ಯಾ ಮಾಧವನ್ ನಡುವಣ ಸ್ನೇಹ ಸಂಬಂಧದ ಬಗ್ಗೆ ಈಗಾಗಲೇ ಸಾಕಷ್ಟು ಗಾಸಿಪ್ ಹರಡಿಕೊಂಡಿದ್ದರೂ ಅವರಿಬ್ಬರೂ ತಮ್ಮ ವಿವಾಹದ ಬಗ್ಗೆ ಮೌನಧಾರಣೆ ಮಾಡಿದ್ದರು.
ದಿಲೀಪ್ ಹಾಗೂ ಕಾವ್ಯ ಇಬ್ಬರಿಗೂ ಇದು ಎರಡನೇ ವಿವಾಹ. ದಿಲೀಪ್ ತಮ್ಮ ಮೊದಲ ಪತ್ನಿ ನಟಿ ಮಂಜು ವಾರಿಯರ್ ಅವರಿಂದ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೊಬ್ಬಳು ಮಗಳಿದ್ದಾಳೆ. ಅತ್ತ ಕಾವ್ಯ ಈ ಹಿಂದೆ ನಿಶಾಲ್ ಚಂದ್ರ ಎಂಬ ನಟನನ್ನು ಮದುವೆಯಾಗಿದ್ದರೂ ಅವರ ಮದುವೆ ಹೆಚ್ಚು ಕಾಲ ಬಾಳಲಿಲ್ಲ. ದಿಲೀಪ್ ಹಾಗೂ ಕಾವ್ಯ ಇಲ್ಲಿಯ ತನಕ 23 ಚಿತ್ರಗಳಲ್ಲಿ ಜತೆಯಾಗಿ ಅಭಿನಯಿಸಿದ್ದಾರೆ.







