ಮನೆಯಂಗಳದಲ್ಲಿ ನಿಲ್ಲಿಸಿದ್ದ ಹೊಸ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಕಾಸರಗೋಡು, ನ.25: ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಹೊಸ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ಇಂದು ಮುಂಜಾನೆ ನಡೆದಿದೆ.
ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದ ಅಲಿ ಆಶಿಫ್ ಎಂಬವರ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಕಾರಿಗೆ ಸಂಪೂರ್ಣ ಹಾನಿಯಾಗಿದೆ. ಮುಂಜಾನೆ 3:30ರ ವೇಳೆ ಈ ಕೃತ್ಯ ಎಸಗಲಾಗಿದೆ. ಸ್ಫೋಟದ ಸದ್ದು ಕೇಳಿ ಮನೆಯವರು ಗಮನಿಸಿದಾಗ ಕಾರು ಉರಿಯುತ್ತಿರುವುದು ಕಂಡುಬಂದಿತ್ತು. ಕೂಡಲೇ ಮನೆಮಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಅನಂತರ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ದೃಶ್ಯಗಳನ್ನು ಪರಿಶೀಲಿಸಿದಾಗ ಹೆಲ್ಮೆಟ್ ಧರಿಸಿದ ಇಬ್ಬರು ಅಂಗಳದಿಂದ ಓಡಿ ಹೋಗುತ್ತಿರುವುದು ಕಂಡುಬಂದಿದೆ. ಮನೆ ಹಿಂಭಾಗದ ಗೇಟ್ ಮೂಲಕ ದುಷ್ಕರ್ಮಿಗಳು ಅಂಗಳಕ್ಕೆ ತಲುಪಿದ್ದಾರೆ. ಕೃತ್ಯದ ಬಳಿಕ ಮುಂಭಾಗದ ಗೇಟ್ ಮೂಲಕ ಪರಾರಿಯಾಗಿದ್ದಾರೆ. ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
Next Story





