ಎಚ್ಚರ !: ಈಗಷ್ಟೇ ಹುಟ್ಟಿದ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದರೆ ಸರಿಯಾಗಿ ಖಚಿತಪಡಿಸಿಕೊಳ್ಳಿ

ಎಚ್ಚರವಿರಲಿ! ವೈದ್ಯರು ಅಥವಾ ಆಸ್ಪತ್ರೆಯ ಸಿಬ್ಬಂದಿ ನಿಮ್ಮ ನವಜಾತ ಮಗು ‘ಸತ್ತಿದೆ’ ಎಂದು ಹೇಳಿದರೆ ಅವರನ್ನು ತಕ್ಷಣವೇ ನಂಬಬೇಡಿ. ಮೃತದೇಹ ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಅವರನ್ನು ಒತ್ತಾಯಿಸಿ. ಇಲ್ಲದಿದ್ದರೆ ನವಜಾತ ಶಿಶುಗಳ ಕಳ್ಳಸಾಗಣೆ ಜಾಲದಲ್ಲಿ ನೀವು ಸಿಕ್ಕಿಬೀಳಬಹುದು. ನಿಮ್ಮ ನವಜಾತ ಮಗು ಜೀವಂತವಾಗಿರಬಹುದು ಮತ್ತು ದಿಲ್ಲಿ,ಮುಂಬೈ.....ಅಷ್ಟೇ ಏಕೆ ಅಮೆರಿಕ ಮತ್ತು ಬ್ರಿಟನ್‌ಗಳಂತಹ ರಾಷ್ಟ್ರಗಳಲ್ಲಿಯ ಸಂತಾನಹೀನ ದಂಪತಿಗೆ ಮಾರಾಟವಾಗಬಹುದು.
ಪಶ್ಚಿಮ ಬಂಗಾಲದ ಸಿಐಡಿ ಪೊಲೀಸರು ಇತ್ತೀಚಿಗಷ್ಟೇ ನವಜಾತ ಶಿಶುಗಳ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿ 13 ಜನರನ್ನು ಬಂಧಿಸಿದ್ದಾರೆ.

ಪಶ್ಚಿಮ ಭಾರತದಲ್ಲಿಯೇ ದೊಡ್ಡದಾದ ಈ ಜಾಲ ಕೋಲ್ಕತಾದ ವಿವಿಧ ನರ್ಸಿಂಗ್ ಹೋಮ್‌ಗಳಲ್ಲಿ ಸಕ್ರಿಯವಾಗಿತ್ತು. ಸಂತಾನಹೀನ ದಂಪತಿಗಳು ಮಗುವನ್ನು ಪಡೆಯಲು ಅನಾಥ ಮತ್ತು ವಾರಸುದಾರರಿಲ್ಲದ ಮಕ್ಕಳಿಗೆ ಆಶ್ರಯ ನೀಡುವ ಹಲವಾರು ಎನ್‌ಜಿಒಗಳನ್ನು ಸಂಪರ್ಕಿಸುತ್ತಾರೆ. ಈ ಎನ್‌ಜಿಒಗಳು ನರ್ಸಿಂಗ್ ಹೋಮ್‌ಗಳ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಂಬಂಧವಿಟ್ಟುಕೊಂಡಿರುವ ಕಮಿಷನ್ ಏಜೆಂಟ್‌ಗಳನ್ನು ಹೊಂದಿರುತ್ತವೆ. ಈ ಏಜೆಂಟ್‌ರಿಂದ ಭಾರೀ ಮೊತ್ತವನ್ನು ಪಡೆದುಕೊಳ್ಳುವ ನರ್ಸಿಂಗ್ ಹೋಮ್‌ಗಳ ವೈದ್ಯರು ಮತ್ತು ಸಿಬ್ಬಂದಿಗಳು ನವಜಾತ ಶಿಶು ಮೃತಪಟ್ಟಿದೆ ಎಂದು ಘೋಷಿಸುತ್ತಾರೆ ಮತ್ತು ಶಿಶುವಿನ ಜನನ ಪ್ರಮಾಣಪತ್ರವನ್ನು ಹೆತ್ತವರಿಗೆ ನೀಡುತ್ತಾರೆ. ಆದರೆ ಶಿಶುವಿನ ಮೃತದೇಹವನ್ನು ಮಾತ್ರ ಒಪ್ಪಿಸುವುದೇ ಇಲ್ಲ.
ಬಳಿಕ ಈ ನವಜಾತ ಶಿಶುವನ್ನು ಎನ್‌ಜಿಒ ಮೂಲಕ ಸಂತಾನಹೀನ ದಂಪತಿಗೆ ಮಾರಾಟ ಮಾಡಲಾಗುತ್ತದೆ. ಕಪ್ಪುಬಣ್ಣದ ಹೆಣ್ಣುಶಿಶುಗಳು ಒಂದು ಲಕ್ಷ ರೂ. ಮತ್ತು ಗಂಡುಶಿಶುಗಳು ಎರಡು ಲಕ್ಷ ರೂ.ಗೆ ಮಾರಾಟವಾದರೆ, ಬಿಳಿಯ ಬಣ್ಣದ ಹೆಣ್ಣುಶಿಶುಗಳು ಒಂದೂವರೆ ಲಕ್ಷ ರೂ.ಗೆ ಮತ್ತು ಗಂಡುಶಿಶುಗಳು ಎರಡು ಲಕ್ಷ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ ಎಂದು ಡಿಎನ್‌ಎ ವರದಿ ಮಾಡಿದೆ.
ಕಳೆದ ಮೂರು ವರ್ಷಗಳಿಂದಲೂ ಕೋಲ್ಕತಾದ ವಿವಿಧ ನರ್ಸಿಂಗ್ ಹೋಮ್‌ಗಳಲ್ಲಿ ಸಕ್ರಿಯವಾಗಿದ್ದ ಈ ಜಾಲವು ದಿಲ್ಲಿ ಮತ್ತು ಮುಂಬೈಯಂತಹ ದೇಶಾದ್ಯಂತದ ನಗರಗಳು ಮಾತ್ರವಲ್ಲ, ದೂರದ ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿಯೂ ತನ್ನ ಕಬಂಧಬಾಹುಗಳನ್ನು ಚಾಚಿತ್ತು.
ಸಿಐಡಿ ಅಧಿಕಾರಿಗಳು ಮಂಗಳವಾರ ಉತ್ತರ 24 ಪರಗಣಗಳ ಜಿಲ್ಲೆಯ ಬದುರಿಯಾ ಎಂಬಲ್ಲಿನ ನರ್ಸಿಂಗ್ ಹೋಮ್‌ವೊಂದರ ಮೇಲೆ ದಾಳಿ ನಡೆಸಿದ ಸಂದರ್ಭ ಈ ಜಾಲವು ಪತ್ತೆಯಾಗಿದೆ ಎಂದು ಡಿಐಜಿ(ಸಿಒಡಿ) ಭರತಲಾಲ್ ಮೀನಾ ತಿಳಿಸಿದರು. ಸಂತಾನಹೀನ ದಂಪತಿಗಳಿಗೆ ಮಾರಾಟ ಮಾಡಲೆಂದು ಹತ್ತಿಯ ಬಟ್ಟೆಗಳಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಗಳಲ್ಲಿ ಸಜ್ಜಾಗಿರಿಸಲಾಗಿದ್ದ ಎರಡು ನವಜಾತ ಶಿಶುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಜಾಲದ ಸದಸ್ಯರು ಈ ಮೊದಲು ಅವಿವಾಹಿತ ತಾಯಂದಿರನ್ನು ತಮ್ಮ ಗುರಿಯಾಗಿಸಿಕೊಂಡಿದ್ದರು ಮತ್ತು ಕೈತುಂಬ ಹಣವನ್ನು ನೀಡಿ ಅವರು ಹೆತ್ತ ಶಿಶುಗಳನ್ನು ಖರೀದಿಸುತ್ತಿದ್ದರು. ಬಳಿಕ ನವಜಾತ ಶಿಶುಗಳ ಹೆತ್ತವರನ್ನು ವಂಚಿಸತೊಡಗಿದ್ದರು.







