ಪುತ್ತೂರಿನಲ್ಲಿ ವಾಹನ ಚಾಲಕರ ಅಪಘಾತ ವಿಮಾ ನೋಂದಣಿ ಅಭಿಯಾನ

ಪುತ್ತೂರು, ನ.25: 2 ದಿನಗಳ ಕಾಲ ನಡೆಯಲಿರುವ ಖಾಸಗಿ ವಾಣಿಜ್ಯ ವಾಹನ ಚಾಲಕ ಅಪಘಾತ ವಿಮಾ ನೋಂದಣಿ ಅಭಿಯಾನಕ್ಕೆ ಶುಕ್ರವಾರ ಪುತ್ತೂರು ನಗರದ ಕಲ್ಲಾರೆ ಸಮೀಪ ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ಎಚ್. ಚಾಲನೆ ನೀಡಿದರು.
ಈ ಸಂದಭರ್ದಲ್ಲಿ ಮಾತನಾಡಿದ ಅವರು, ದೇಶದ ಕಾರ್ಮಿಕರ ಪೈಕಿ 93 ಶೇ. ಅಸಂಘಟಿತ ವಲಯದ ಕಾರ್ಮಿಕರೇ ಇದ್ದಾರೆ. ಇವರ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಸವಲತ್ತುಗಳನ್ನು ನೀಡುತ್ತಾ ಬಂದಿದೆ. ರಾಜ್ಯ ಸರಕಾರ ರಾಜ್ಯದಲ್ಲಿ 43 ಅಸಂಘಟಿತ ವಲಯಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ರಚಿಸಿದೆ. ಕಟ್ಟಡ ಕಾರ್ಮಿಕರಿಗೂ ಈಗಾಗಲೇ ಮಂಡಳಿ ರಚನೆಯಾಗಿದೆ. ಪುತ್ತೂರು, ಸುಳ್ಯ ಭಾಗದಲ್ಲಿ 4,000 ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿ ಸೌಲಭ್ಯ ನೀಡಲಾಗಿದೆ. ಅಪಘಾತ ವಿಮಾ ಯೋಜನೆಯನ್ನು ಚಾಲಕರು ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದನ್ನು ಕಂಡಕ್ಟರ್‌ಗಳಿಗೆ ಕೂಡ ವಿಸ್ತರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಆಟೋ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್‌ಗಳ ಚಾಲಕರು ಚಾಲನಾ ಪರವಾನಿಗೆ, ಬ್ಯಾಡ್ಜ್, ಗುರುತಿನ ಚೀಟಿ, 2 ಫೋಟೊ ಕೊಟ್ಟು ಕಾರ್ಮಿಕ ಇಲಾಖೆಯಲ್ಲಿ 25 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಮಂಡಳಿಯಿಂದ ಗುರುತಿನ ಚೀಟಿ ಸಿಗುತ್ತದೆ. ಅಪಘಾತದ ಚಿಕಿತ್ಸಾ ವೆಚ್ಚ, ಅಂಗವೈಕಲ್ಯ ಉಂಟಾದರೆ 1 ಲಕ್ಷದವರೆಗೆ, ಮರಣ ಸಂಭವಿಸಿದರೆ 2 ಲಕ್ಷದವರೆಗೆ ಪರಿಹಾರ ಸಿಗುತ್ತದೆ. ಘಟನೆ ಸಂಭವಿಸಿದ ಆರು ತಿಂಗಳ ಒಳಗೆ ಇದಕ್ಕಾಗಿ ಕ್ಲೈವ್ ಮಾಡಬೇಕು ಎಂದು ಅವರು ತಿಳಿಸಿದರು.
ದ.ಕ. ಜಿಲ್ಲಾ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ನ್ಯಾಯವಾದಿ ಬಿ. ಪುರಂದರ ಭಟ್ ಮಾತನಾಡಿ, ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಚಾಲಕರು ತಮ್ಮ ಸ್ವಂತ ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ತಮ್ಮ ಕುಟುಂಬದವರನ್ನೂ ಗಮನಿಸಿಕೊಳ್ಳಬೇಕು. ಇದಕ್ಕಾಗಿ ಈ ವಿಮೆ ಅತ್ಯಗತ್ಯ ಎಂದರು.
ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಕಾನಾವು ಕ್ಲಿನಿಕ್‌ನ ವೈದ್ಯ ಡಾ. ನರಸಿಂಹ ಶರ್ಮಾ ಉಪಸ್ಥಿತರಿದ್ದರು. ಪುತ್ತೂರಿನ ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.







