ಸರಕಾರಿ ಜಾಗದಲ್ಲಿರುವ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ: ಕೋಟ

ಉಡುಪಿ, ನ.25: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ಬಡಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣ ಮತ್ತು ಮೂಲಭೂತ ಅವಶ್ಯಕತೆಗಾಗಿ ಸರಕಾರಿ ಜಾಗದಲ್ಲಿರುವ ತಮ್ಮ ವಾಸ್ತವ್ಯದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಕೆಲವು ಕುಟುಂಬಗಳಂತೂ ತಮ್ಮ ಸ್ವಂತ ಖರ್ಚಿನಲ್ಲೇ ವಿದ್ಯುತ್ ಸಂಪರ್ಕಕ್ಕೆ ಬೇಡಿಕೆಯಿಟ್ಟರೂ ಅವಕಾಶ ಸಿಗುತ್ತಿಲ್ಲವಾದ್ದರಿಂದ ಕಂದಾಯ ಮಂತ್ರಿಗಳು ಮಧ್ಯ ಪ್ರವೇಶಿಸಿ 94ಸಿಯಡಿ ಅರ್ಜಿ ಸಲ್ಲಿಸಿದ ಬಡ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ನಿರಕ್ಷೇಪಣಾ ಪತ್ರ ನೀಡಲು ಆದೇಶ ನೀಡಬೇಕೆಂದು ವಿಧಾನ ಪರಿಷತ್‌ನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸರಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿರುವ ಅಧಿವೇಶದಲ್ಲಿ ಇಂದು ಅವರು ಶೂನ್ಯ ವೇಳೆಯಲ್ಲಿ ಈ ಪ್ರಶ್ನೆ ಎತ್ತಿದರು. ವಿದ್ಯುತ್ ಸಂಪರ್ಕ ನೀಡಲು ಹಕ್ಕು ಪತ್ರ ಬೇಕೆಂದು ಸರಕಾರ ಹೇಳುತ್ತಿದ್ದು ಕುಂದಾಪುರ ತಾಲೂಕು ಒಂದರಲ್ಲೇ 94ಸಿಯಡಿ 6300ಕ್ಕೂ ಹೆಚ್ಚು ಅರ್ಜಿ ಗಳಿದ್ದರೆ, ಇಲ್ಲಿಯವರೆಗೆ ಕೇವಲ 200 ಹಕ್ಕುಪತ್ರವನ್ನಷ್ಟೇ ವಿಲೇವಾರಿ ಮಾಡಲಾಗಿದೆ. ಇದು ಸರಕಾರದ ತೀವ್ರ ಗತಿಯ ಆಡಳಿತದ ಶೈಲಿ ಎಂದು ಶ್ರೀನಿವಾಸ ಪೂಜಾರಿ ಛೇಡಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ 70ಸಾವಿರಕ್ಕೂ ಮಿಕ್ಕಿ ಅರ್ಜಿ ಸಲ್ಲಿಕೆಯಾಗಿದ್ದರೆ, ಇನ್ನೂ 45 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ತನಿಖೆಗೆ ಬಾಕಿಯಿವೆ. ಉಡುಪಿ ಜಿಲ್ಲೆಯಲ್ಲಿ ಬಂದ ಅರ್ಜಿಗಳ ಸಂಖ್ಯೆ 16ಸಾವಿರ ಮೀರಿವೆ. ಇನ್ನೂ 12 ಸಾವಿರ ಅರ್ಜಿಗಳು ತನಿಖೆಗೆ ಬಾಕಿಯಿವೆ. ಹೀಗಾಗಿ ಇವರೆಲ್ಲ ಹಕ್ಕುಪತ್ರ ವಿತರಣೆವರೆಗೆ ಕಾಯಬೇಕಾಗಿದೆ ಎಂದು ಅವರು ಹೇಳಿದರು.
ಇದರಿಂದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ. ರಾಜ್ಯ ಉಚ್ಛ ನ್ಯಾಯಾಲಯವು ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದು ಮೂಲಭೂತ ಹಕ್ಕೆಂದು ಹೇಳಿರುವುದನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು. ಕೆಲವು ಕಡೆಗಳಲ್ಲಂತೂ ವಿದ್ಯುತ್ ಸಂಪರ್ಕಕ್ಕಾಗಿ ಬೇಡಿಕೆಯಿಟ್ಟ ಕುಟುಂಬಗಳು ವಿದ್ಯುತ್ ಸಂಪರ್ಕ ಕೊಡಿ, ನಾವು ಮುಂದೆ ನ್ಯಾಯಾಲಯ ಹಾಗೂ ಸರಕಾರ ಗಳು ಯಾವುದೇ ಆದೇಶ ನೀಡಿದರೂ ಬದ್ಧರಿದ್ದೇವೆ ಎಂಬ ಅಫಿದಾವಿತ್ ಕೊಡುತ್ತೇವೆ ಎಂದು ಮನವಿ ಮಾಡಿದರೂ ವಿದ್ಯುತ್ ನಿರಕ್ಷೇಪಣಾ ಪತ್ರ ನೀಡುತ್ತಿಲ್ಲ ಎಂದವರು ದೂರಿದರು.
ಸರಕಾರ ಬಡವರ ಬೇಡಿಕೆಗೆ ಸ್ಪಂದಿಸಿ ಕೂಡಲೇ ಬಡವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅನುಮತಿ ನೀಡುವಂತೆ ಗ್ರಾಪಂಗಳಿಗೆ ಆದೇಶ ನೀಡಬೇಕೆಂದು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. ಸರಕಾರದ ಪರವಾಗಿ ಉತ್ತರಿಸಿದ ಸಭಾ ನಾಯಕ ಗೃಹ ಸಚಿವ ಜಿ. ಪರಮೇಶ್ವರ್ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.







