ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ: ದೇವಿಪ್ರಸಾದ್ ಶೆಟ್ಟಿ

ಪಡುಬಿದ್ರೆ, ನ.25: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್‌ಸಂಗ್ರಹಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗ್ರಾಮ ಪಂಚಾಯತ್‌ಗಳ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ.
ಶುಕ್ರವಾರ ಕಾಪು ಪ್ರೆಸ್‌ಕ್ಲಬ್‌ನಲ್ಲಿ ಹೆಜಮಾಡಿ ನಾಗರಿಕ ಸಮಿತಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ಚತುಷ್ಪಥ ಕಾಮಗಾರಿಗೆ ನಾಗರಿಕರು ಬೆಂಬಲ ಸೂಚಿಸಿದ್ದಾರೆ. ರಸ್ತೆಯ ವಿನ್ಯಾಸದಂತೆ ಕಾಮಗಾರಿ ನಡೆಯಬೇಕಿತ್ತು. ಆದರೆ ಮೊದಲು ತಯಾರಿಸಿದ ನಕ್ಷೆಯಂತೆ ರಸ್ತೆಯನ್ನು ನಿರ್ಮಿಸಿಲ್ಲ. ಕೆಲವಡೆ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ. ರಸ್ತೆಯ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿಲ್ಲ. ಆದರೂ ಏಕಾಏಕಿ ಟೋಲ್‌ಸಂಗ್ರಹಕ್ಕೆ ಸಿದ್ಧತೆ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳದೆ ಹೆಜಮಾಡಿಯಲ್ಲಿ ನಿರ್ಮಿಸಿದ ಟೋಲ್‌ಗೇಟ್‌ನಲ್ಲಿ ಟೋಲ್‌ಸಂಗ್ರಹಕ್ಕೆ ಅವಕಾಶ ನೀಡುಮದಿಲ್ಲ ಎಂದು ಎಚ್ಚರಿಸಿದರು.
ಪಡುಬಿದ್ರೆಯಲ್ಲಿ ಬೈಪಾಸ್ ರಸ್ತೆ ಮತ್ತು ಹೆದ್ದಾರಿ ವಿಸ್ತರಣೆ ಬಗ್ಗೆ ಹೆದ್ದಾರಿ ಪ್ರಾಧಿಕಾರದಲ್ಲಿ ಗೊಂದಲ ಇತ್ತು. ಈ ಗೊಂದಲಕ್ಕೆ ತೆರೆ ಎಳೆದು ಈಗ ಹೆದ್ದಾರಿಯಲ್ಲೇ ವಿಸ್ತರಣೆಗೆ ಮುಂದಾಗಿದೆ. ಆದರೆ ಕಾಮಗಾರಿ ಕೈಗೆತ್ತಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದೆ. ರಸ್ತೆ ಇಕ್ಕಟ್ಟಿನಿಂದಾಗಿ ಪಡುಬಿದ್ರೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೂಡಲೇ ಪಡುಬಿದ್ರೆ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ ಮಾತನಾಡಿ, ಹೆಜಮಾಡಿ ಗ್ರಾಮದಲ್ಲಿ ಚತುಷ್ಪಥ ಕಾಮಗಾರಿಯೊಂದಿಗೆ ರಾಜ್ಯದಲ್ಲಿ ಬೃಹತ್ ಎನ್ನಬಹುದಾದ ಟೋಲ್‌ಗೇಟ್ ಮತ್ತು ಟ್ರಕ್ ಯಾರ್ಡ್‌ನ್ನು ನಿರ್ಮಾಣ ಮಾಡಿದೆ. ಇದರಿಂದ ಹೆಜಮಾಡಿ ಪರಿಸರದ ಜನರು ತೀವ್ರ ತೊಂದರೆ ಅನುವಿಸುವಂತಾಗಿದೆ. ಈ ಬಗ್ಗೆ ಶಾಸಕ ವಿನಯ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಕೆಲ ತಿಂಗಳ ಹಿಂದೆ ಪ್ರಾರಂಭ ಆಗಬೇಕಿದ್ದ ಟೋಲ್‌ಗೇಟ್‌ನ್ನು ನಿಲ್ಲಿಸಲಾಗಿತ್ತು. ಇದೀಗ ನವಯುಗ ಕಂಪನಿ ಅಧಿಕಾರಿಗಳು ಡಿಸೆಂಬರ್ 1ರಂದು ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಅವರು ಜಿಲ್ಲಾಧಿಕಾರಿಯವರ ಸಮ್ಮುಖ ನೀಡಿದ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದರು.
ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು, ಜನ ಸಂಚಾರಕ್ಕೆ ಅನುಕೂಲವಾಗುವಂತೆ ಅಂಡರ್ ಪಾಸ್ ನಿರ್ಮಿಸಬೇಕು. ಟೋಲ್‌ಗೇಟ್ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಹಾಗೂ ಹೆಚ್ಚಿನ ಪರಿಹಾರ ನೀಡಬೇಕು. ಪಡುಬಿದ್ರೆ ಬೀಡು ಬಳಿಯ ಸುಜ್ಲಾನ್ ಗೇಟ್‌ನಿಂದ ಕಣ್ಣಂಗಾರ್ ಬೈಪಾಸ್‌ವರೆಗೆ ಶೀಘ್ರ ಸರ್ವಿಸ್ ರಸ್ತೆ ನಿರ್ಮಿಸಬೇಕು. ಈ ಬೇಡಿಕೆ ಈಡೇರಿಸದೆ ಟೋಲ್‌ಸಂಗ್ರಹ ಮಾಡಬಾರದು. ಒಂದು ಬೇಡಿಕೆ ಈಡೇರಿಸದೆ ಟೋಲ್‌ಸಂಗ್ರಹಕ್ಕೆ ಮುಂದಾದರೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಹೋರಾಟ ಸಮಿತಿಯ ಕಾರ್ಯದರ್ಶಿ ಶೇಖರ್ ಹೆಜಮಾಡಿ, ಮಹೇಶ್ ಸಾಲ್ಯಾನ್, ಮನೋಜ್ ಪೂಜಾರಿ ಉಪಸ್ಥಿತರಿದ್ದರು.







