‘ಕುವೆಂಪು ಬಂಟಮಲೆ’ ಚೊಚ್ಚಲ ಪ್ರಶಸ್ತಿಗೆ ಆಹ್ವಾನ
ಸುಳ್ಯ, ನ.25: ಕೋಮುವಾದದ ವಿರುದ್ಧ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ದುಡಿಯುವ ಹಿರಿಯರನ್ನು ಗುರುತಿಸಿ ಈ ವರ್ಷದಿಂದ ರಾಷ್ಟ್ರಮಟ್ಟದ ಕುವೆಂಪು ಬಂಟಮಲೆ ಪ್ರಶಸ್ತಿಯನ್ನು ನೀಡಲು ಗುತ್ತಿಗಾರಿನ ಬಂಟಮಲೆ ಅಕಾಡೆಮಿ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿ ಅಧ್ಯಕ್ಷ ಎ.ಕೆ.ಹಿಮಕರ, ಪಕ್ಷ ರಾಜಕಾರಣ ಇಲ್ಲವೇ ಪಕ್ಷ ರಹಿತ ರಾಜಕಾರಣದಲ್ಲಿ ತಮ್ಮದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿರುವ ಮತ್ತು ಪಕ್ಷ ರಾಜಕಾರಣವನ್ನು ಮೀರಿದ ನಿಲುವು ಬದ್ಧತೆಗಳನ್ನು ಅಭಿವ್ಯಕ್ತಿಸಿರುವ, ರಾಜಕೀಯ ಮುತ್ಸದ್ಧಿತನ ತೋರಿರುವ ವ್ಯಕ್ತಿಗಳಿಗೆ ಕುವೆಂಪು ಬಂಟಮಲೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಕೋಮುವಾದ, ಜಾತಿವಾದ, ಪ್ರಾದೇಶಿಕತೆ, ಪ್ರತ್ಯೇಕತಾವಾದ, ವೌಢ್ಯತೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಂತಹ ಸಾಮಾಜಿಕ-ರಾಜಕೀಯ ಪಿಡುಗುಗಳನ್ನು ಧಿಕ್ಕರಿಸಿ ಜನಪರ ನಿಲುವು-ನಿಷ್ಠೆಗಳನ್ನು ತೋರ್ಪಡಿಸಿದ ವ್ಯಕ್ತಿಗಳಿಗೆ ಈ ಪ್ರಶಸ್ತಿ ಮೀಸಲಾಗಿದೆ. ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು, ರೈತ ಚಳುವಳಿ-ಆಂದೋಲನಗಳಿಗೆ ಕಾರಣವಾಗಿರವರೂ ಅರ್ಹರಾಗಿರುತ್ತಾರೆ. ಇಂತಹ ವ್ಯಕ್ತಿಗಳ ಹೆಸರನ್ನು ಸಾರ್ವಜನಿಕರು ಶಿಫಾರಸು ಮಾಡಬಹುದಾಗಿದ್ದು, ತಜ್ಷರ ಸಮಿತಿ ಅರ್ಹರನ್ನು ಆಯ್ಕೆ ಮಾಡಲಿದೆ ಎಂದವರು ಹೇಳಿದರು.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ನಾರಾಯಣಗುರು, ಪೆರಿಯಾರ್ ಮೊದಲಾದವರ ಮಾನವೀಯ ಸಂದೇಶಗಳು, ಸಾಮಾಜಿಕ ಪ್ರಗತಿಯ ಮಾದರಿಗಳನ್ನು ನಾಶಮಾಡುತ್ತಾ, ವಿಚ್ಛಿದ್ರಕಾರಿ, ಪ್ರತಿಗಾಮಿ ಸಿದ್ಧಾಂತಗಳೇ ಆಳುವವರ ನೀತಿಗಳಾಗಿರುವ ಈ ಸನ್ನಿವೇಶದಲ್ಲಿ ಪುರೋಗಾಮಿ, ಪ್ರಗತಿಪರ ವಿಚಾರಗಳನ್ನು ಆಯ್ದುಂತಹ ಮಾದರಿಗಳಿಗೆ ಬದ್ಧತೆಯನ್ನು ಪಾಲಿಸುತ್ತಾ ಬಂದಿರುವ ಹಿರಿಯರನ್ನು ಗುರುತಿಸುವುದೇ ಈ ಪ್ರಶಸ್ತಿ ನೀಡುವ ಮುಖ್ಯ ಉದ್ದೇಶ ಎಂದು ಸಾಹಿತಿ ವಿದ್ಯಾಧರ ಬಡ್ಡಡ್ಕ ಹೇಳಿದರು.
ಯಶವಂತ ಕುಡೆಕಲ್ಲು, ಕೊರತ್ತೋಡಿ ದುಗ್ಗಪ್ಪ ಗೌಡ, ದಿನೇಶ್ ಹಾಲೆಮಜಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







