ಹೊಸ ನೋಟುಗಳಲ್ಲಿ ಮುದ್ರಣ ವ್ಯತ್ಯಾಸ ದೂರು: ಆರ್‌ಬಿಐ ಹೇಳಿದ್ದೇನು ?

ಹೊಸದಿಲ್ಲಿ, ನ.25: ರೂ.500 ಹಾಗೂ 2000ದ ಹೊಸ ನೋಟುಗಳು ಉಪಯೋಗಕ್ಕೆ ಸಂಪೂರ್ಣ ಕಾನೂನುಬದ್ಧವಾದವುಗಳೆಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಪಷ್ಟೀಕರಣ ನೀಡಿದೆ. ಈ ಮುಖ ಬೆಲೆಗಳ ಹೊಸ ನೋಟುಗಳು ವಿವಿಧ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ವಿವಿಧ ಮಾದರಿಗಳಲ್ಲಿವೆಯೆಂಬ ದೂರುಗಳು ಬಂದ ಬಳಿಕ ಅದು ಈ ಹೇಳಿಕೆ ಹೊರಡಿಸಿದೆ.
ಅದು ವಿಭಿನ್ನ ಮಾದರಿಯಲ್ಲ. 10 ಲಕ್ಷ ನೋಟುಗಳಲ್ಲಿ ಒಮ್ಮೆ ಇಂತಹ ಮುದ್ರಣ ದೋಷ ಕಾಣಿಸಿಕೊಳ್ಳಬಹುದು. ಅದು ಕಾನೂನುಬದ್ಧವಾಗಿ ಮಾನ್ಯತೆಯಿರುವ ನೋಟಾಗಿರುತ್ತದೆ ಹಾಗೂ ವ್ಯವಹಾರದಲ್ಲಿ ಮುಕ್ತವಾಗಿ ಉಪಯೋಗಿಸಬಹುದೆಂದು ಆರ್‌ಬಿಐಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಆದರೆ, ಯಾರಾದರೂ ಅಂತಹ ನೋಟನ್ನು ಬಳಸಲು ಇಚ್ಛಿಸದಿದ್ದಲ್ಲಿ ಅದನ್ನು ಆರ್‌ಬಿಐಗೆ ಹಿಂದಿರುಗಿಸಬಹುದು. ತಾವು ಅವರಿಗೆ ಅದರ ಪೂರ್ಣ ವೌಲ್ಯವನ್ನು ನೀಡುತ್ತೇವೆಂದು ಅವರು ಹೇಳಿದ್ದಾರೆ.
ಕೆಲವು ನೋಟುಗಳಲ್ಲಿ ಮಹಾತ್ಮಾಗಾಂಧಿಯವರ ಮುಖದ ಗೋಚರ ನೆರಳುಗಳು ಒಂದಕ್ಕಿಂತ ಹೆಚ್ಚಿವೆ. ಕೆಲವದರಲ್ಲಿ ರಾಷ್ಟ್ರ ಲಾಂಛನದ ಅಳವಡಿಕೆಯಲ್ಲಿ ಸಮಸ್ಯೆಯಿದೆಯೆಂದು ಜನರು ದೂರಿದ್ದಾರೆ. ಅಲ್ಲದೆ, ಕೆಲವು ವರದಿಗಳು ಹೊಸ ನೋಟುಗಳ ಅಂಚುಗಳು ಭಿನ್ನ ಗಾತ್ರದಲ್ಲಿವೆಯೆಂದು ತಿಳಿಸಿವೆ.
ರೂ.2000ದ ನೋಟುಗಳ ಬಣ್ಣದ ಛಾಯೆಯಲ್ಲಿ ಭಿನ್ನತೆಯಿದೆ. ತಾನು ಎರಡು ಬ್ಯಾಂಕ್‌ಗಳಿಂದ ಎರಡು ವಿಭಿನ್ನ ಛಾಯೆಗಳ ನೋಟುಗಳನ್ನು ಪಡೆದಿದ್ದೇನೆಂದು ಮುಂಬೈಯ ಮ್ಯಾಜಿ ಬ್ಯಾಂಕರ್ ಒಬ್ಬರು ಹೇಳಿದ್ದಾರೆ.
ಇದು ನಾಗರಿಕರಲ್ಲಿ ಗೊಂದಲ ಸೃಷ್ಟಿಸಬಹುದು. ನಕಲಿ ನೋಟುಗಳಿಗೆ ಹಾದಿ ಕಲ್ಪಿಸಬಹುದು ಹಾಗೂ ಕಾನೂನುಬಾಹಿರ ಹಣದ ವಿರುದ್ಧ ಹೋರಾಡುವ ಸರಕಾರದ ಉದ್ದೇಶದ ವಿರುದ್ಧ ಕೆಲಸ ಮಾಡಬಹುದೆಂದು ಕೆಲವರು ಭೀತಿ ವ್ಯಕ್ತಪಡಿಸಿದ್ದಾರೆ.







