ಪ್ರಜಾಪ್ರಭುತ್ವ ಉಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರ: ಎಂ.ಸಿದ್ದರಾಜು

ವಿಟ್ಲ, ನ.25: ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ ಸೇವೆಯ ಜೊತೆಗೆ ಬ್ರಿಟೀಷರ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡ ಪತ್ರಿಕಾ ಮಾಧ್ಯಮ ಇಂದು ಉದ್ಯಮವಾಗಿ ಪರಿವರ್ತನೆಗೊಂಡಿದ್ದರೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದು ರಾಜ್ಯ ಮಾಧ್ಯಮ ಅಕಾಡಮಿ ಅಧ್ಯಕ್ಷ ಎಂ.ಸಿದ್ದರಾಜು ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಮಾಣಿ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಪತ್ರಿಕಾ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮ’ದಲ್ಲಿ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳು ಹಂತ ಹಂತವಾಗಿ ಬೆಳವಣಿಗೆ ಕಂಡಿದೆ. ಇದರಿಂದಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ವಿದ್ಯಾಮಾನಗಳನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಲು ನಮಗೆ ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಉನ್ನತ ಶಿಕ್ಷಣ, ಭವಿಷ್ಯಕ್ಕೆ ಪೂರಕವಾದ ಬಂಡವಾಳ ಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ.ಶಿವಪೂಜಿ ಮಾತನಾಡಿ, ಪ್ರಚಲಿತ ವಿದ್ಯಾಮಾನದಲ್ಲೂ ಪತ್ರಿಕಾ ರಂಗವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಜನರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಣಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕಿರಣ್ ಹೆಗ್ಡೆ ಮಾತನಾಡಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳೊಂದಿಗೆ ಪತ್ರಿಕಾ ಸಂವಾದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಗೌರೀಶ್ ಶಾಸ್ತ್ರಿ, ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್.ಮಾವೆ, ಕಾಲೇಜಿನ ಪ್ರಾಂಶುಪಾಲ ರವೀಂದ್ರ ಎಂ.ಶೆಟ್ಟಿ ಮತ್ತಿತರರು ಶುಭ ಹಾರೈಸಿದರು. ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷ ಬಿ.ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಗೀತಾ ಚಂದ್ರಶೇಖರ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಸದಸ್ಯ ಇಬ್ರಾಹೀಂ ಕೆ. ಮಾಣಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ, ಉಪಾಧ್ಯಕ್ಷೆ ರೇವತಿ, ಸದಸ್ಯೆ ಪ್ರೇಮಾ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ ಬೆಂಡೆ, ಕರ್ನಾಟಕ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಕೆ. ಭಂಡಾರಿ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ರೈ ಅತಿಥಿಗಳಾಗಿ ಭಾಗವಹಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಐಸಾಕ್ ರಿಚಾರ್ಡ್, ಕೋಶಾಧಿಕಾರಿ ಬಾವ ಪದರಂಗಿ, ಸದಸ್ಯರಾದ ದತ್ತಾತ್ರೇಯ ಹೆಗ್ಡೆ, ಇಝಾಝ್, ಪತ್ರಿಕಾ ಛಾಯಾಗ್ರಾಹಕ ಸತೀಶ ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿದರು. ಗೌರವಾಧ್ಯಕ್ಷ ಜಯಾನಂದ ಪೆರಾಜೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳು
ಮಾಧ್ಯಮಗಳು ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವೀಕರಿಸುವುದು ಸರಿಯೇ?
ಪ್ರಮುಖ ಸುದ್ದಿಗಳು ಕೆಲವೊಂದು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿಲ್ಲ ಯಾಕೆ?
ಪತ್ರಿಕಾ ಮಾಧ್ಯಮದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕೊಡುಗೆ ಏನು?
ಪತ್ರಿಕೆಗಳು ರಾಜಕೀಯ ಪ್ರೇರಿತವಾಗಿದೆಯೇ?
ಮಾಧ್ಯಮ ರಂಗವು ನಂಬಿಕೆಗೆ ಅರ್ಹವೇ?
ಮಾಧ್ಯಮಗಳಿಂದ ಜನತೆಗೆ ಇರುವ ಪ್ರಯೋಜನವೇನು?
ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಯಾವ ರೀತಿ ಕೆಲಸ ನಿರ್ವಹಿಸುತ್ತಿದೆ?
ವಿದ್ಯಾರ್ಥಿಗಳು ಪತ್ರಿಕೆಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು?.







