ಪ್ರಧಾನಿ ಸಸ್ಯಾಹಾರಿ ಎಂದು ಡಿಜಿಪಿಗಳಿಗೂ ಮಾಂಸಾಹಾರ ಕೊಡಬೇಡಿ ಎಂದ ಪ್ರಧಾನಿ ಕಚೇರಿ !

ಹೊಸದಿಲ್ಲಿ, ನ. 25 : ದೇಶದೆಲ್ಲೆಡೆ ಹೈದರಾಬಾದಿ ಬಿರಿಯಾನಿ ಹುಡುಕಿಕೊಂಡು ಹೋಗುವವರ ಸಂಖ್ಯೆ ದೊಡ್ಡದಿದೆ . ಹೀಗಿರುವಾಗ ಹೈದೆರಾಬಾದ್ ಗೆ ಹೋಗಿ ನೀವು ಹೈದರಾಬಾದಿ ಬಿರಿಯಾನಿ ತಿನ್ನದೇ ಬರುತ್ತೀರಾ ? ಸದ್ಯ ಹೈದರಾಬಾದ್ ನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಈ ಅವಕಾಶ ಇಲ್ಲ ! ಏಕೆಂದರೆ , ಬಿರಿಯಾನಿ ಸಹಿತ ಎಲ್ಲ ಮಾಂಸಾಹಾರಿ ಊಟ ನಿಷೇಧಿಸಿರುವ ಆದೇಶ ಬಂದಿರುವುದು ಬೇರೆಲ್ಲಿಂದಲೂ ಅಲ್ಲ , ದೇಶದ ಪ್ರಧಾನ ಮಂತ್ರಿಗಳ ಕಚೇರಿಯಿಂದ !
ಇಲ್ಲಿನ ರಾಷ್ಟ್ರೀಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ದೇಶದ ಬೇಹು ಇಲಾಖೆ ಆಯೋಜಿಸಿರುವ ಡಿಜಿಪಿಗಳ ಸಮಾವೇಶದಲ್ಲಿ ಕೇವಲ ಸಸ್ಯಾಹಾರಿ ಭೋಜನ ಮಾತ್ರ ಒದಗಿಸುವಂತೆ ಪ್ರಧಾನಿ ಕಚೇರಿಯಿಂದ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಎನ್ ಡಿ ಟಿವಿ ವರದಿ ಮಾಡಿದೆ.
ಸಮಾವೇಶದಲ್ಲಿ ಭಾಗವಹಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪಟ ಸಸ್ಯಾಹಾರಿ . ಆದ್ದರಿಂದ ಸಮಾವೇಶದಲ್ಲಿ ಮಾಂಸಾಹಾರದ ವ್ಯವಸ್ಥೆ ಮಾಡುವುದು ಅವರಿಗೆ ಇಷ್ಟವಿಲ್ಲ . ಅದಕ್ಕಾಗಿ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಸಸ್ಯಾಹಾರಿಗಳಾಗಬೇಕಾಗಿದೆ. ಹಾಗಾಗಿ ದೋಸೆ, ಪೋಹಾ, ಸಾಂಬಾರ್ ಇತ್ಯಾದಿಗಳನ್ನೇ ರುಚಿ ನೋಡುವ ' ಸೌಭಾಗ್ಯ ' ಡಿಜಿಪಿಗಳದ್ದು. ಪರಿಸ್ಥಿತಿ ಎಲ್ಲಿಯವರೆಗೆ ಹೋಗಿದೆ ಎಂದರೆ, ಮೊಟ್ಟೆಯನ್ನೂ ಬಳಸುವಂತಿಲ್ಲ ಎಂದು ಆದೇಶವಾಗಿದೆ.





