ಪ್ರಧಾನಿಯ ಆಕ್ಷೇಪಾರ್ಹ ಚಿತ್ರ ಹಾಕಿದ ವ್ಯಕ್ತಿಯ ಬಂಧನ

ಭೋಪಾಲ್, ನ. 25 : ಪ್ರಧಾನಿ ನರೇಂದ್ರ ಮೋದಿ ಅವರು ಚಪ್ಪಲಿಗಳ ಹಾರ ಹಾಕಿಕೊಂಡಂತೆ ತೋರಿಸುವ ನಕಲಿ ಚಿತ್ರವೊಂದನ್ನು ವಾಟ್ಸ್ ಆಪ್ ಗ್ರೂಪ್ ಒಂದರಲ್ಲಿ ಹಾಕಿದ ಇಲ್ಲಿನ ಮೊರೆನಾ ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಸ್ಲಮ್ ಖಾನ್ ಎಂದು ಗುರುತಿಸಲಾಗಿದೆ. ಹೆಚ್ಚು ಬಿಜೆಪಿ ಕಾರ್ಯಕರ್ತರೇ ಇರುವ ವಾಟ್ಸ್ ಆಪ್ ಗ್ರೂಪ್ ನಲ್ಲಿ ಈ ಚಿತ್ರ ಹಾಕಿದ ಅಸ್ಲಮ್ ಇದರ ಬಗ್ಗೆ ಯಾವುದೇ ಕಮೆಂಟ್ ಹಾಕಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಿಸಿದ ಬಳಿಕ ಆತನನ್ನು ಬಂಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಇತ್ತೀಚಿಗೆ ನೋಟು ರದ್ದತಿ ಮಾಡಿದ್ದು ತನಗೆ ಸರಿ ಕಾಣಲಿಲ್ಲ ಎಂದು ಅಸ್ಲಮ್ ಹೇಳಿದ್ದಾನೆ ಎಂದು ವರದಿಯಾಗಿದೆ.
ಕಳೆದ 11 ತಿಂಗಳಲ್ಲಿ ಮಧ್ಯ ಪ್ರದೇಶ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಹಾಕಿದ ಆರೋಪದಲ್ಲಿ ಬಂಧಿತ 8 ನೇ ಆರೋಪಿ ಈತ. ಈ ಹಿಂದೆ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಕೀಳು ಅಭಿರುಚಿಯ ಕಮೆಂಟ್ ಹಾಕಿದ್ದಕ್ಕೆ ವಿಹಿಂಪ ನಾಯಕನೊಬ್ಬನನ್ನು ಬಂಧಿಸಲಾಗಿತ್ತು.





