ಹಲ್ಲೆ, ಬೆದರಿಕೆ: ಅಪರಾಧಿಗಳಿಗೆ ಶಿಕ್ಷೆ

ಮಂಗಳೂರು, ನ. 25: ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲ್ಲಿ ಎರಡೂ ತಂಡದವರಿಗೆ ಶಿಕ್ಷೆ ಪ್ರಕಟಿಸಿ ಮಂಗಳೂರು ಪ್ರಧಾನ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.
ಉರ್ವಸ್ಟೋರ್ ದಡ್ಡಲ್‌ಕಾಡ್ ನಿವಾಸಿಗಳಾಗಿರುವ ಗಣೇಶ (37), ಪ್ರಸನ್ನ (40), ಯಶವಂತ (35), ದರ್ಶನ್ (34), ವಿನಯನೇತ್ರ (37) ಅವರು ಸಂಬಂಧಿ ಕೆಪಿಟಿಯಲ್ಲಿ ವ್ಯವಸ್ಥಾಪಕರಾಗಿದ್ದ ದಶರಥ (61) ಎಂಬವರಿಗೆ ಕ್ರಿಕೆಟ್ ಬ್ಯಾಟ್‌ನಿಂದ ಗಂಭೀರ ಹಲ್ಲೆ ನಡೆಸಿದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಇವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ವಿಫಲರಾದಲ್ಲಿ ಮತ್ತೆ 6 ತಿಂಗಳು ಸೆರೆಮನೆ ವಾಸ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಇದೇ ಘಟನೆಗೆ ಸಂಬಂಧಿಸಿ ಶಿಕ್ಷೆಗೊಳಗಾದ ಅಪರಾಧಿಗಳು ಅಂದು ದಶರಥನ ವಿರುದ್ಧ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ದಾಖಲಿಸಿದ್ದರು. ನ್ಯಾಯಾಲಯ ದಶರಥನಿಗೂ 6 ತಿಂಗಳು ಸೆರೆಮನೆ ವಾಸ ಹಾಗೂ 4 ಸಾವಿರ ರೂ.ದಂಡ ವಿಧಿಸಿದೆ. ದಂಡ ತೆರುವಲ್ಲಿ ತಪ್ಪಿದರೆ ಮತ್ತೆ 3 ತಿಂಗಳು ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಿದೆ.
ಘಟನೆಯ ಹಿನ್ನೆಲೆ
2010 ಮಾ.21 ರಂದು ಮಧ್ಯಾಹ್ನ 12:30ಕ್ಕೆ ಭೂ ವಿವಾದಕ್ಕೆ ಸಂಬಂಧಿಸಿ ದಡ್ಡಲ್‌ಕಾಡ್ ಗಣೇಶನ ಕಟ್ಟೆಯ ಬಳಿ ಗಣೇಶ, ಪ್ರಸನ್ನ, ಯಶವಂತ, ದರ್ಶನ್, ವಿನಯನೇತ್ರರಿದ್ದ ತಂಡ ಹಾಗೂ ದಶರಥರ ನಡುವೆ ಹೊಡೆದಾಟ ನಡೆದಿತ್ತು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.
ಗಣೇಶನ ತಂಡದ ವಿರುದ್ಧ ದಾಖಲಾದ ಪ್ರಕರಣವನ್ನು ಉರ್ವ ಠಾಣೆಯ ಅಂದಿನ ಎಸ್ಸೈ ಸುರೇಶ್ ಪಿ. ತನಿಖೆ ನಡೆಸಿದ್ದರು. ದಶರಥನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಅಂದಿನ ಎಸ್ಸೈ ಅನಂತ ಮುರ್ಡೇಶ್ವರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸುನಿಲ್ ಸಿಂಗ್ ಇತ್ತಂಡಗಳ ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಗಣೇಶ ತಂಡದ ಪ್ರಕರಣದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದ ಮಂಡಿಸಿದ್ದರೆ, ದಶರಥನ ಪ್ರಕರಣದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಸುಧೀರ್ ಕುಮಾರ್ ವಾದಿಸಿದ್ದರು.







