ವೈವಿಧ್ಯತೆ ಇಲ್ಲದ ಕೃಷಿಗೆ ಭವಿಷ್ಯವಿಲ್ಲ: ಡಾ. ಸೋನ್ಸ್
ತೀರ್ಥಹಳ್ಳಿ: ರಾಜ್ಯ ಮಟ್ಟದ ‘ವಿದೇಶಿ ಹಣ್ಣಿನ ಬೆಳೆ’ವಿಚಾರ ಸಂಕಿರಣ,
ತೀರ್ಥಹಳ್ಳಿ, ನ.25: ವೈವಿಧ್ಯತೆಯ ಮೊದಲ ಪಾಠವೇ ನಮ್ಮ ಪಶ್ಚಿಮಘಟ್ಟದ ಕಾಡುಗಳು. ವೈವಿಧ್ಯತೆ ಇಲ್ಲದಿದ್ದರೆ ಕೃಷಿಗೆ ಭವಿಷ್ಯವಿಲ್ಲ. ಬೆಳೆಗಳ ವೈವಿಧ್ಯತೆಗೆ ರೈತರು ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂದು ಮೂಡುಬಿದಿರೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಲ್. ಸಿ.ಸೋನ್ಸ್ ಹೇಳಿದ್ದಾರೆ.
ಪಟ್ಟಣದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ನಡೆದ ತೀರ್ಥಹಳ್ಳಿ ಮಲೆನಾಡು ಕ್ಲಬ್ ತಾಲೂಕು ಅಡಿಕೆ ಬೆಳೆಗಾರರ ಸಂಘ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಲಯನ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದ ರಾಜ್ಯ ಮಟ್ಟದ ವಿದೇಶಿ ಹಣ್ಣು ಬೆಳೆಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಂದು ಒಂದೇ ಬೆಳೆಯನ್ನು ಅವಲಂಬಿಸಿ ನಷ್ಟದ ಹಾದಿಯಲ್ಲಿ ಸಾಗುತ್ತಾ ಆತ್ಮಹತ್ಯೆ ದಾರಿ ಹಿಡಿದು ತಮ್ಮ ಬದುಕನ್ನು ಅಂತ್ಯಗೊಳಿಸಿಕೊಳ್ಳುತ್ತಿರುವುದು ದುರದೃಷ್ಟಕರ. ರೈತರು ಹೊಂದಾಣಿಕೆಯಾಗುವ ಬೆಳೆಗಳನ್ನು ಬೆಳೆದು ಮಾರುಕಟ್ಟೆಯನ್ನು ಗಮನಿಸಿದಾಗ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ವಿದೇಶಿ ಹಣ್ಣಿನ ಬೆಳೆಗೆ ಸೂಕ್ತವಾದ ಪ್ರದೇಶವಿದೆ. ಕಡಿಮೆ ನೀರು ಬೇಕಾದಂತಹ ಅನಾನಸ್, ಚಿಕ್ಕು ಬೆಳೆಗಳು ಆರ್ಥಿಕವಾಗಿ ರೈತರನ್ನು ಸದೃಢಗೊಳಿಸುತ್ತದೆ ಎಂದರು.
ವಿದೇಶಿ ತಳಿಗಳನ್ನು ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದೆ.
ವೇದಿಕೆಯಲ್ಲಿ ಸಾಂಬಾರು ಮಂಡಳಿಯ ನಿವೃತ್ತ ಹಿರಿಯ ನಿರ್ದೇಶಕ ಎಚ್. ಎಸ್. ಶ್ರೀನಿವಾಸ್, ಮಲೆನಾಡು ಕ್ಲಬ್ ಅಧ್ಯಕ್ಷ ಕೆ. ಆರ್. ದಯಾನಂದ್, ಲಯನ್ಸ್ ಕ್ಲಬ್ ಅಧ್ಯಕ್ಷ ಕಾರ್ತಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.





