ಕೊಟ್ಟಿಗೆಹಾರ ತಪಾಸಣಾ ಠಾಣೆಯಲ್ಲಿ ಅವ್ಯವಹಾರ
ಅಧಿಕಾರಿಯ ದಿಟ್ಟ ಹೆಜ್ಜೆಗೆ ಅವ್ಯವಹಾರ ಬಯಲು,

ಮೂಡಿಗೆರೆ, ನ.25: ಕೃಷಿ ಉತ್ಪನ್ನದ ಸಾಗಣೆಯ ಕೊಟ್ಟಿಗೆಹಾರದ ತಪಾಸಣಾ ಠಾಣೆಯಲ್ಲಿ ರಶೀದಿ ನೀಡದೆ ಹಣ ದುರ್ಬಳಕೆ ಮಾಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೊಟ್ಟಿಗೆಹಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತಪಾಸಣಾ ಠಾಣೆಯಲ್ಲಿ ಹಣ್ಣು, ಹಂಪಲುಗಳು, ತರಕಾರಿ ಸಾಗಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ಸಾಗಾಟದ ಉತ್ಪನ್ನದ ಮೇಲೆ ನಿಗದಿತ ಶುಲ್ಕ ಹಾಕಿ ರಶೀದಿ ನೀಡಬೇಕು ಎನ್ನುವ ನಿಯಮವಿದೆ. ಆದರೆ, ಸಿಬ್ಬಂದಿ ಹಗಲು ರಾತ್ರಿ ಗೇಟ್ ಕಾದರೂ ಸಮಿತಿಯ ಬೊಕ್ಕಸಕ್ಕೆ ಹೋಗುತ್ತಿದ್ದ ಹಣ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ಕೊಟ್ಟಿಗೆಹಾರದ ಎಪಿಎಂಸಿ ತಪಾಸಣಾ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ದಿನವೊಂದಕ್ಕೆ 120 ರಿಂದ 200 ರೂ. ಶುಲ್ಕ ವಸೂಲಿ ಮಾಡಿರುವ ಲೆಕ್ಕವನ್ನು ಸರಕಾರಕ್ಕೆ ನೀಡುತ್ತಿದ್ದರು. ತನಿಖಾ ಠಾಣೆಯಲ್ಲಿ ಸಂಗ್ರಹವಾಗುವ ಹಣವನ್ನು ಅಲ್ಲಿನ ಸಿಬ್ಬಂದಿ ದುರುಪಯೋಗ ಮಾಡಿಕೊಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯ ಕಾರ್ಯದರ್ಶಿ ಸರಸ್ವತಿಯವರೇ ಖುದ್ದು ರಾತ್ರಿ ಪಾಲಿಯಲ್ಲಿ ಕೆಲಸ ನಿರ್ವಹಿಸಿ ಪ್ರತೀ ದಿನ 4,500 ರೂ. ರವರೆಗೂ ಶುಲ್ಕ ವಿಧಿಸುವ ಮೂಲಕ ಅಲ್ಲಿನ ಅವ್ಯವಹಾರಗಳನ್ನು ಬಯಲಿಗೆ ಎಳೆದಿದ್ದಾರೆ.
ಕೊಟ್ಟಿಗೆಹಾರದ ತನಿಖಾ ಠಾಣೆಯಲ್ಲಿ ಶುಲ್ಕದ ಆದಾಯ ಸಮಿತಿಗೆ ವಂಚನೆಯಾಗುತ್ತಿರುವುದನ್ನು ಅರಿತು ರಾತ್ರಿ ಮತ್ತು ಹಗಲು ನಿಗಾವಹಿಸಲು ಸ್ವತಃ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಿಬ್ಬಂದಿಯ ಕೊರತೆಯಿಂದ ಕಚೇರಿ ಹಾಗೂ ತಪಾಸಣಾ ಠಾಣೆಯಲ್ಲಿ ಎರಡೂ ಕಡೆ ಕೆಲಸ ನಿರ್ವಹಿಸಲು ಕಷ್ಷವಾಗುತ್ತಿದೆ. ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಕೊರತೆ ಶೀಘ್ರ ನೀಗಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾಗ ಪ್ರತಿ ದಿನ 120 ರಿಂದ 200 ರೂ. ಮಾತ್ರ ಶುಲ್ಕ ಸಂಗ್ರಹವಾಗುತ್ತಿತ್ತು. ಈ ಬಗ್ಗೆ ಸ್ಥಳೀಯವಾಗಿ ದೂರುಗಳೂ ಬಂದಿದ್ದ ಕಾರಣ ರಾತ್ರಿ ಪಾಳೆಯಲ್ಲಿ ಸ್ವತಃ ನಾನೇ ಖುದ್ದಾಗಿ ಕೆಲಸ ನಿರ್ವಹಿಸಲು ಮುಂದಾದೆ. ಇದರಿಂದ ಪ್ರತಿ ದಿನ 4,500 ರೂ. ಸಂಗ್ರಹ ಮಾಡಿದ್ದೇನೆ. ಈ ಗೇಟ್‌ನಲ್ಲಿ ತಪಾಸಣೆ ನಡೆಸಿ ವ್ಯವಹಾರ ನಡೆಯುತ್ತಿರುವ ಬಗ್ಗೆ ತಿಳಿಯುವಂತಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಸರಸ್ವತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿ





