ಹಿಂದುಳಿದ ವರ್ಗದ ಹಾಸ್ಟೆಲ್‌ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ
ಶಿವಮೊಗ್ಗ, ನ. 25: ಇಲ್ಲಿನ ಬಾಪೂಜಿ ನಗರ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕರ ಹಾಸ್ಟೆಲ್‌ಗೆ ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಹಾಸ್ಟೆಲ್‌ನ ವಾರ್ಡನ್‌ಗೆ ಶೋಕಾಸ್ ಜಾರಿಗೊಳಿಸಿದ ಘಟನೆ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ಏಕಾಏಕಿ ಬಾಪೂಜಿ ನಗರ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕರ ಹಾಸ್ಟೆಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನಗೊಂಡು ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಹರಿಹಾಯ್ದು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್ ವಾರ್ಡನ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದರು. ಕಾಲಮಿತಿಯೊಳಗೆ ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆ ಸರಿಪಡಿಸಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿ ಹಿಂದಿರುಗಿದ್ದಾರೆ. ಅವ್ಯವಸ್ಥೆ: ಜಿಲ್ಲಾಧಿಕಾರಿ ಹಾಸ್ಟೆಲ್‌ನ ಪ್ರತಿ ಯೊಂದು ವಿಭಾಗಕ್ಕೂ ಖುದ್ದು ಭೇಟಿ ನೀಡಿ ತಪಾಸೆ ನಡೆಸಿದರು. ಅಸ್ವಚ್ಛತೆಯಿಂದ ಕೂಡಿದ್ದ ಶೌಚಾಲಯ, ಧೂಳಿನಿಂದ ಆವರಿಸಿದ್ದ ವಿದ್ಯಾರ್ಥಿಗಳು ತಂಗಿರುವ ಕೊಠಡಿಗಳು, ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿ, ಗೋಡೆಗಳ ಮೂಲೆ ಮೂಲೆಗಳಲ್ಲಿ ಗುಟ್ಕಾ ಉ
ಗುಳಿನ ಕಲೆ, ಪೈಂಟಿಂಗ್ ಆಗದ ಗೋಡೆಗಳು ಸೇರಿದಂತೆ ಹಲವು ಅವ್ಯವಸ್ಥೆಗಳು ಕಂಡು ಬಂದವು. ‘ಊಟೋಪಚಾರ ಗುಣ ಮಟ್ಟ ದಿಂದ ಕೂಡಿರುವುದಿಲ್ಲ. ಬೇಕಾ ಬಿಟ್ಟಿ ಯಾಗಿ ಅಡುಗೆ ಮಾಡಲಾಗುತ್ತದೆ. ರಾತ್ರಿಯ ಅಡುಗೆಯನ್ನು ಮಧ್ಯಾಹ್ನವೇ ಸಿದ್ಧಪಡಿಸಿಡಲಾಗುತ್ತಿದೆ. ಹಾಸ್ಟೆಲ್ ಒಳಾಂಗಣ, ಹೊರಾಂಗಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಅಪರಿಚಿತರು ಕೂಡ ಹಾಸ್ಟೆಲ್‌ಗೆ ಆಗಮಿಸಿ ಬೀಡುಬಿಡುತ್ತಿದ್ದಾರೆ. ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರ್ಯಾರು ಇಲ್ಲದಂತಾಗಿದೆ. ನೀವಾದರೂ ಹಾಸ್ಟೆಲ್‌ನಲ್ಲಿ
ರುವ ಸಮಸ್ಯೆ ಪರಿಹಾರಕ್ಕೆ ಅಗತ್ಯ ಗಮನಹರಿಸಿ’ ಎಂದು ಈ ಸಂದರ್ಭ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ಕರ್ತವ್ಯಲೋಪದ ಬಗ್ಗೆ ದೂರುಗಳ ಸರಮಾಲೆಯನ್ನೇ ಡಿಸಿಯವರ ಮುಂದಿಟ್ಟರು. ಭರವಸೆ
ವಿದ್ಯಾರ್ಥಿಗಳ ಅಹವಾಲು ಆಲಿಸಿ ಬಳಿಕಮಾತನಾಡಿದ ಜಿಲ್ಲಾಧಿಕಾರಿ, ‘ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯನ್ನು ಖುದ್ದು ಗಮನಿಸಿದ್ದೇನೆ. ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಹಾಸ್ಟೆಲ್‌ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಾಡು ಮಾಡುವಂತೆ ಸೂಚಿಸಲಾಗಿದೆ. ಹೊರಗಿನ ವ್ಯಕ್ತಿಗಳಿಗೆ ಪ್ರವೇಶ ಕಲ್ಪಿಸದಂತೆ ಅಗತ್ಯ ಕ್ರಮಕೈಗೊಳ್ಳಬೆೀಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ವಿದ್ಯಾರ್ಥಿ ಗಳಿಗೆ ಭರವಸೆ ನೀಡಿದರು.





