ಹಾಂಕಾಂಗ್ ಓಪನ್: ಸಿಂಧು ಸೆಮಿಫೈನಲ್‌ಗೆ
ಸೈನಾಗೆ ಸೋಲು

ಹಾಂಕಾಂಗ್, ನ.25: ಇತ್ತೀಚೆಗಷ್ಟೇ ಚೀನಾ ಓಪನ್‌ನಲ್ಲಿ ಚೊಚ್ಚಲ ಸೂಪರ್ ಸರಣಿ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹಾಂಕಾಂಗ್ ಓಪನ್ ಸೂಪರ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಸಿಂಗಾಪುರದ ಕ್ಸಿಯಾಯು ಲಿಯಾಂಗ್‌ರನ್ನು 21-17, 21-23, 21-18 ಗೇಮ್‌ಗಳ ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.
ಸೈನಾಗೆ ಸೋಲು: ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ನೆಹ್ವಾಲ್ ಅವರು ಹಾಂಕಾಂಗ್‌ನ ಚೆಯುಂಗ್ ಎನ್‌ಗಾನ್ ವಿರುದ್ಧ 8-21, 21-18, 19-21 ಗೇಮ್‌ಗಳ ಅಂತರದಿಂದ ಸೋತು ನಿರಾಸೆಗೊಳಿಸಿದರು.
ಗಂಭೀರವಾದ ಮಂಡಿನೋವಿನಿಂದ ಚೇತರಿಸಿಕೊಂಡು ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿದ್ದ ಸೈನಾ ಮೊದಲ ಗೇಮ್‌ನ್ನು ಕೇವಲ 12 ನಿಮಿಷಗಳಲ್ಲಿ 8-21 ಅಂತರದಿಂದ ಸೋತರು. ಎರಡನೆ ಗೇಮ್‌ನ್ನು 21-18 ರಿಂದ ಗೆದ್ದುಕೊಂಡು ಉತ್ತಮ ಪ್ರತಿಹೋರಾಟ ನೀಡಿದರು. ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.
ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸೈನಾ ಆರಂಭದಲ್ಲಿ 7-3 ಮುನ್ನಡೆಯಲ್ಲಿದ್ದರು. ಆದರೆ, ಸ್ಥಳೀಯ ಆಟಗಾರ್ತಿ ಚೆಯುಂಗ್ ಸತತ 5 ಅಂಕ ಗಳಿಸಿ ಮೇಲುಗೈ ಸಾಧಿಸಿದರು. ಸತತ ಆರು ಅಂಕವನ್ನು ಗಳಿಸಿದ ಸೈನಾ ಸೆಟ್ ಅಂತರವನ್ನು 17-18ಕ್ಕೆ ಇಳಿಸಿದರು. ಅಂತಿಮ ಹಂತದಲ್ಲಿ ತಿರುಗಿಬಿದ್ದ ಚೆಯುಂಗ್ ಮೂರನೆ ಗೇಮ್‌ನ್ನು 21-19 ರಿಂದ ಗೆದ್ದುಕೊಂಡರು. ಚೆಯುಂಗ್ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸಿಂಧು ಅವರನ್ನು ಎದುರಿಸಲಿದ್ದಾರೆ.
ಇದಕ್ಕೆ ಮೊದಲು ವಿಶ್ವದ ನಂ.9ನೆ ಆಟಗಾರ್ತಿ ಸಿಂಧು ಮೊದಲ ಗೇಮ್‌ನ ಆರಂಭದಲ್ಲಿ ಎರಡು ಅಂಕದಿಂದ ಹಿಂದುಳಿದಿದ್ದರು. ಆ ನಂತರ ಉತ್ತಮ ಪ್ರದರ್ಶನ ನೀಡಿದ ಅವರು 21-17 ರಿಂದ ಮೊದಲ ಗೇಮ್‌ನ್ನು ಜಯಿಸಿದರು.
ಎರಡನೆ ಗೇಮ್‌ನಲ್ಲಿ ಇಬ್ಬರು ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಹೈದರಾಬಾದ್ ಆಟಗಾರ್ತಿ ಒಂದು ಹಂತದಲ್ಲಿ 17-13 ರಿಂದ ಮುನ್ನಡೆಯಲ್ಲಿದ್ದರೂ ಲಿಯಾಂಗ್ ತಿರುಗೇಟು ನೀಡುವ ಮೂಲಕ 2ನೆ ಗೇಮ್‌ನ್ನು 23-21 ಅಂತರದಿಂದ ಜಯಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಮೂರನೆ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಇಬ್ಬರೂ ಶಟ್ಲರ್‌ಗಳು ಸತತವಾಗಿ ಅಂಕವನ್ನು ಕಳೆಹಾಕಿದರು. ಅಂತಿಮವಾಗಿ ಸಿಂಧು 21-18 ರಿಂದ ಮೂರನೆ ಗೇಮ್‌ನ್ನು ತನ್ನದಾಗಿಸಿಕೊಂಡು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು.
ಸಿಂಧು ಮುಂದಿನ ಸುತ್ತಿನಲ್ಲಿ ಚೆಯುಂಗ್ ಎನ್‌ಗಾನ್‌ರನ್ನು ಎದುರಿಸಲಿದ್ದಾರೆ.
ಬಿಡಬ್ಲುಎಫ್ ರ್ಯಾಂಕಿಂಗ್: ಸಿಂಧು 9ನೆ ಸ್ಥಾನಕ್ಕೆ ಲಗ್ಗೆ, ನೆಹ್ವಾಲ್‌ಗೆ ಹಿಂಭಡ್ತಿ
ಹೊಸದಿಲ್ಲಿ, ನ.25: ಕೆಲವೇ ದಿನಗಳ ಹಿಂದೆ ಚೀನಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿರುವ ಪಿ.ವಿ. ಸಿಂಧು ಶುಕ್ರವಾರ ಇಲ್ಲಿ ಬಿಡುಗಡೆಯಾಗಿರುವ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ 9ನೆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆದರೆ, ಸೈನಾ ನೆಹ್ವಾಲ್ ಅಗ್ರ-10ರ ರ್ಯಾಂಕಿಂಗ್‌ನಿಂದ ಹೊರ ನಡೆದಿದ್ದಾರೆ.
ಚೀನಾ ಓಪನ್ ಚಾಂಪಿಯನ್ ಸಿಂಧು ಎರಡು ಸ್ಥಾನ ಭಡ್ತಿ ಪಡೆದು 9ನೆ ಸ್ಥಾನಕ್ಕೇರಿದರು. ಗಂಭೀರ ಗಾಯದಿಂದ ಚೇತರಿಸಿಕೊಂಡು ದೀರ್ಘ ಸಮಯದ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿರುವ ಮಾಜಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಐದು ಸ್ಥಾನ ಕೆಳ ಜಾರಿ 11ನೆ ಸ್ಥಾನದಲ್ಲಿದ್ದಾರೆ.
ಸೈನಾ ಹಾಗೂ ಸಿಂಧು ಈಗ ನಡೆಯುತ್ತಿರುವ ಹಾಂಕಾಂಗ್ ಓಪನ್ ಟೂರ್ನಿಯಲ್ಲಿನ ನೀಡುವ ಪ್ರದರ್ಶನವನ್ನು ಆಧರಿಸಿ ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಟೂರ್ನಿ ಬಿಡಬ್ಲುಎಫ್ ಸೂಪರ್ ಸರಣಿ ಫೈನಲ್ ಟೂರ್ನಿಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮ್ ನಾಲ್ಕು ಸ್ಥಾನ ಮೇಲಕ್ಕೇರಿ 19ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಎಚ್‌ಎಸ್ ಪ್ರಣಯ್ 2 ಸ್ಥಾನ ಭಡ್ತಿ ಪಡೆದು 25ನೆ ಸ್ಥಾನದಲ್ಲಿದ್ದಾರೆ.
ಚೀನಾ ಓಪನ್ ಟೂರ್ನಿಯಿಂದ ಹೊರಗುಳಿದಿರುವ ಕೆ.ಶ್ರೀಕಾಂತ್ 12ನೆ ರ್ಯಾಂಕಿನಲ್ಲಿದ್ದು, ಅಗ್ರ ರ್ಯಾಂಕಿನಲ್ಲಿರುವ ಭಾರತದ ಆಟಗಾರನಾಗಿದ್ದಾರೆ.







