ಭಾರತದ ನೀರು ಪಾಕಿಸ್ತಾನಕ್ಕೆ ಹರಿಯಲು ಅವಕಾಶ ನೀಡುವುದಿಲ್ಲ
ಸಿಂಧೂ ವಿವಾದದ ಬಗ್ಗೆ ಮೋದಿ
ಬಠಿಂಡಾ, ನ.25: ಸಿಂಧೂ ನದಿಯ ನೀರು ‘ನಮ್ಮ ರೈತರಿಗೆ ಸೇರಿದುದಾಗಿದೆ’. ಪಾಕಿಸ್ತಾನಕ್ಕೆ ಹರಿಯುವ ನೀರಿನ ಮೇಲೆ ಭಾರತಕ್ಕೆ ಹಕ್ಕಿದೆಯೆಂದು ಚುನಾವಣಾ ಹೊಸ್ತಿಲಲ್ಲಿರುವ ಪಂಜಾಬಿನಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತವು ಹಕ್ಕನ್ನು ಪಡೆದಿರುವ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಪಾಕಿಸ್ತಾನದಲ್ಲಿ ಹರಿದು ಅದು ಸಮುದ್ರವನ್ನು ಸೇರುತ್ತಿದೆ. ಆ ನೀರು ಒದಗಿಸಲು ತಾವು ಸಾಧ್ಯವಿರುವುದನ್ನೆಲ್ಲ ಮಾಡುತ್ತೇವೆಂದು ಭಟಂಡಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್‌ನ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ದಿಲ್ಲಿಯಲ್ಲಿ ಸರಕಾರಗಳು ಬಂದಿವೆ ಹಾಗೂ ಹೋಗಿವೆ. ಆದರೆ, ಯಾರೂ ರೈತರ ಸಮಸ್ಯೆಗೆ ಗಮನ ನೀಡಿಲ್ಲ. ಪಾಕಿಸ್ತಾನ ಅದರ ಸಂಪೂರ್ಣ ಲಾಭ ಪಡೆಯಿತು. ಆದರೆ, ಇನ್ನದು ಸಾಧ್ಯವಿಲ್ಲ. ತನ್ನ ರೈತರು ಹಕ್ಕಿನಿಂದ ಅವರದಾಗಿರುವುದನ್ನು ಪಡೆಯುವುದನ್ನು ತಾನು ಖಚಿತಪಡಿಸಲಿದ್ದೇನೆಂದು ಹೇಳಿದರು.
ಭಾರತದ ಸರ್ಜಿಕಲ್ ದಾಳಿಯ ಬಳಿಕ ತನಗೇನಾಯಿತೆಂಬುದೇ ಪಾಕಿಸ್ತಾನಕ್ಕೆ ತಿಳಿಯಲಿಲ್ಲ. ಅದು ಸರ್ಜಿಕಲ್ ದಾಳಿಯಿಂದ ಇನ್ನೂ ಚೇತರಿಸಿಕೊಂಡಿಲ್ಲವೆಂದು ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯು ಸೆಪ್ಟಂಬರ್‌ನಲ್ಲಿ ನಡೆಸಿದ್ದ ಸೀಮಿತ ದಾಳಿಯನ್ನುಲ್ಲೇಖಿಸಿ ತಿಳಿಸಿದರು.
ಭಾರತ-ಪಾಕಿಸ್ತಾನಗಳ ನಡುವೆ 6 ನದಿಗಳ ನೀರು ಹಂಚಿಕೆಯ 1960ರ ಸಿಂಧೂ ಜನ ಒಪ್ಪಂದಕ್ಕೆ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆ ವಹಿಸಿತ್ತು. ಪಾಕಿಸ್ತಾನದ ಭಯೋತ್ಪಾದಕರು 19 ಮಂದಿ ಭಾರತೀಯ ಯೋಧರ ಹತ್ಯೆ ನಡೆಸಿದ ಉರಿ ದಾಳಿಯ ಬಳಿಕ ಅದೀಗ ಕೇಂದ್ರ ಬಿಂದುವಾಗಿದೆ. ‘ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲಾರವು’ ಎನ್ನುವ ಮೂಲಕ ಮೋದಿ, ಸಿಂಧೂ ಜಲ ಒಪ್ಪಂದದ ಪರಾಮರ್ಶೆಯ ಸೂಚನೆ ನೀಡಿದ್ದರು.





