ಎರಡು ವಿಭಿನ್ನ 500 ರೂಪಾಯಿ ಹೊಸ ನೋಟುಗಳು ಪತ್ತೆ!
ಹೊಸದಿಲ್ಲಿ, ನ.25: ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಹೊಸ 500 ರೂಪಾಯಿ ನೋಟುಗಳು ವಿಭಿನ್ನವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದು ಕೇವಲ ಗೊಂದಲಕ್ಕೆ ಕಾರಣವಾಗಿರುವುದು ಮಾತ್ರವಲ್ಲದೇ, ಕಳ್ಳನೋಟು ಚಲಾವಣೆಗೆ ಆಹ್ವಾನ ನೀಡಿದಂತೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರ ನೋಟು ಅಮಾನ್ಯ ಮಾಡಲು ಮುಖ್ಯ ಕಾರಣವೇ ಕಳ್ಳನೋಟು ನಿರ್ಬಂಧಿಸುವುದಾಗಿದ್ದು, ಹೊಸನೋಟುಗಳ ಗೊಂದಲ ಈ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ.
ಟೈಮ್ಸ್ ಆಫ್ ಇಂಡಿಯಾ ವಿಶ್ಲೇಷಣೆ ನಡೆಸಿದಾಗ ಮೂರು ಬಗೆಯ ನೋಟುಗಳು ಸಿಕ್ಕಿವೆ. ಒಂದು ಪ್ರಕರಣದಲ್ಲಿ, ದಿಲ್ಲಿ ನಿವಾಸಿ ಅಬ್ಸರ್ ಹೇಳುವಂತೆ, ಗಾಂಧಿಯ ಮುಖದ ಭಾಗದಲ್ಲಿ ನೆರಳು ಅಧಿಕವಾಗಿದೆ. ಜೊತೆಗೆ ರಾಷ್ಟ್ರಲಾಂಛನದ ಜೊತೆಗೆ ಇದು ಸರಿಯಾಗಿ ಸಂಯೋಜನೆಯಾಗಿಲ್ಲ. ಕ್ರಮಸಂಖ್ಯೆ ಕೂಡಾ ಸಮರ್ಪಕವಾಗಿ ಸಂಯೋಜನೆಯಾಗಿಲ್ಲ
ಗುರುಗಾಂವ್‌ನ ರೆಹಾನ್ ಶಾ ಅವರು ಕಂಡುಹಿಡಿದಂತೆ ಚೌಕಟ್ಟು ಗೆರೆ ಗಾತ್ರ ಕೂಡಾ ಭಿನ್ನವಾಗಿದೆ. ಮುಂಬೈ ನಿವಾಸಿಯೊಬ್ಬರಿಗೆ ವಿಭಿನ್ನ ಬಣ್ಣದ ಎರಡು ನೋಟುಗಳು ಸಿಕ್ಕಿವೆ. ಒಂದರಲ್ಲಿ ತಿಳಿಬಣ್ಣದ ನೆರಳು ಕಾಣಿಸುತ್ತದೆ.
ಪ್ರಸ್ತುತ ಇರುವ ತುರಾತುರಿ ಹಿನ್ನೆಲೆಯಲ್ಲಿ ದೋಷಯುಕ್ತ ನೋಟುಗಳನ್ನೂ ಬಿಡುಗಡೆ ಮಾಡಿರುವ ಸಾಧ್ಯತೆ ಇದೆ ಎಂದು ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲ ಹೇಳಿದ್ದಾರೆ. ಆದರೆ ಜನ ಇದನ್ನು ಸ್ವೀಕರಿಸಬಹುದು ಹಾಗೂ ಆರ್‌ಬಿಐಗೆ ಮರಳಿಸಬಹುದು ಎಂದು ಅವರು ಹೇಳಿದ್ದಾರೆ.
ಹೊಸ ನೋಟುಗಳನ್ನು ಚಲಾವಣೆಗೆ ತಂದರೂ ಕಳ್ಳನೋಟು ದಂಧೆ ನಿಲ್ಲಿಸುವುದು ಸುಲಭವಲ್ಲ. ಏಕೆಂದರೆ ಪಾಕಿಸ್ತಾನದಲ್ಲಿ ನೋಟು ಮುದ್ರಣ ವ್ಯವಸ್ಥೆ ನಮ್ಮಷ್ಟೇ ಸುಧಾರಿಸಿದೆ. ಆದರೆ ಇಂಥ ನೋಟುಗಳನ್ನು ಉತ್ಪಾದಿಸುವುದು ಸ್ವಲ್ಪವಿಳಂಬವಾಗಬಹುದು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿದ್ದಾರೆ.





