ಮೋದಿಯ ಹುಲಿ ಸವಾರಿ
ಒಬ್ಬ ಪ್ರಧಾನಿ ಜನರಿಂದ ಆಯ್ಕೆಯಾಗಿದ್ದರೂ, ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಯಾ ಕ್ಷೇತ್ರದ ತಜ್ಞರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಬೇಕಾಗುತ್ತದೆ. ಯಾಕೆಂದರೆ, ಆ ಕ್ಷೇತ್ರದಲ್ಲಿ ಕೈಯಾಡಿಸುವಾಗ, ಅದರ ಸೂಕ್ಷ್ಮಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಇಡೀ ವಿಶ್ವ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ನೋಟು ನಿಷೇಧದಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕ ತಜ್ಞರ ಜೊತೆಗೆ ದೀರ್ಘ ಕಾಲದ ಸಮಾಲೋಚನೆ ಮಾಡಬೇಕಾಗುತ್ತದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಮೇಲೆ ಅದು ಬೀರಬಹುದಾದ ಎಲ್ಲ ದೂರಗಾಮಿ ಪರಿಣಾಮಗಳನ್ನೂ ಗಮನಕ್ಕೆ ತೆಗೆದುಕೊಂಡು ಬಳಿಕ ಸ್ಪಷ್ಟವಾದ ನಿರ್ಧಾರಕ್ಕೆ ಬರಬೇಕು. ತನ್ನ ತೀರ್ಮಾನ ಹೇಗೆ ದೇಶವನ್ನು ಮುನ್ನಡೆಸುತ್ತದೆ ಮತ್ತು ಇಲ್ಲಿನ ಉದ್ಯಮ ಮತ್ತು ಕೃಷಿ ವ್ಯವಸ್ಥೆಯನ್ನು ಮೇಲೆತ್ತುತ್ತದೆ ಎನ್ನುವುದನ್ನು ವಿರೋಧ ಪಕ್ಷಗಳಿಗೂ, ಶ್ರೀಸಾಮಾನ್ಯರಿಗೂ ಸ್ಪಷ್ಟಪಡಿಸುವಷ್ಟು ಅದರ ಬಗ್ಗೆ ಮಾಹಿತಿಗಳನ್ನು ಹೊಂದಿರಬೇಕಾಗುತ್ತದೆ. ಆದರೆ ಕಳೆದ ಒಂದು ವಾರದಿಂದ ನರೇಂದ್ರ ಮೋದಿಯವರು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ನೋಟು ನಿಷೇಧವೆನ್ನುವ ಅಪಕ್ವ ನಿರ್ಧಾರ ಸದ್ಯದ ದಿನಗಳಲ್ಲೂ, ದೂರಗಾಮಿಯಾಗಿ ಬೀರುತ್ತಿರುವ ಮತ್ತು ಬೀರಬಹುದಾದ ದುಷ್ಪರಿಣಾಮಗಳು ದೇಶಾದ್ಯಂತ ಚರ್ಚೆಯಾಗುತ್ತಿದ್ದರೆ, ನರೇಂದ್ರ ಮೋದಿ ಎಂದಿನಂತೆಯೇ ಭಾವುಕ ಮತ್ತು ರೋಚಕ ಭಾಷಣಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಕನಿಷ್ಠ ಮೋದಿಯವರಿಗೆ ಸಾಧ್ಯವಾಗದೇ ಇದ್ದರೆ ಅವರ ಜೊತೆಗಿರುವ ಆರ್ಥಿಕ ತಜ್ಞರ ಮೂಲಕವಾದರೂ, ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವುದು ಪ್ರಧಾನಿಯ ಕರ್ತವ್ಯವಾಗಿತ್ತು. ಆದರೆ ಯಾವ ಅರ್ಥಶಾಸ್ತ್ರಜ್ಞರೂ ಮೋದಿಯ ನಿಲುವನ್ನು ಸಮರ್ಥಿಸಿ ಹೇಳಿಕೆಗಳನ್ನು ನೀಡುತ್ತಿಲ್ಲ. ಬರೇ ರಾಜಕಾರಣಿಗಳಷ್ಟೇ ಉಡಾಫೆಯ ಹೇಳಿಕೆಗಳನ್ನು ನೀಡಿ ವಿರೋಧ ಪಕ್ಷದ ಬಾಯಿಯನ್ನು ಮುಚ್ಚಿಸುವ ಯತ್ನವನ್ನು ಮಾಡುತ್ತಿದ್ದಾರೆ. ತಮ್ಮ ಆ್ಯಪ್ ಸಮೀಕ್ಷೆಯ ಮೂಲಕ ಇಡೀ ದೇಶ ತನ್ನ ಕಾರ್ಯವನ್ನು ಬೆಂಬಲಿಸಿದೆ ಎಂದು ನಂಬಿಸಲು ಮೋದಿ ಹೊರಟಿದ್ದಾರೆ. ಆ ಮೂಲಕವೇ ತನ್ನ ಈ ನಿರ್ಧಾರ ಸರಿಯಾದುದು ಎಂದು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ ಸಂಸತ್ತಿನಲ್ಲಿ, ತನ್ನ ನಿರ್ಧಾರ ಹೇಗೆ ದೇಶದ ಆರ್ಥಿಕತೆಯನ್ನು ಮೇಲೆತ್ತುತ್ತದೆ ಎನ್ನುವುದರ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದೇ ಸಂದರ್ಭದಲ್ಲಿ ಹಿರಿಯ ಅರ್ಥಶಾಸ್ತ್ರಜ್ಞರೂ, ಮಾಜಿ ಅರ್ಥ ಸಚಿವರು, ಮಾಜಿ ಪ್ರಧಾನಿಯೂ ಆಗಿರುವ ಮನಮೋಹನ್ ಸಿಂಗ್ ಗುರುವಾರ ನೋಟು ನಿಷೇಧವೆಂಬ ನಿರ್ಧಾರ ಎಷ್ಟರ ಮಟ್ಟಿಗೆ ಈ ದೇಶದ ಅರ್ಥ ವ್ಯವಸ್ಥೆಯನ್ನು ನಾಶ ಮಾಡಲಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಇಡೀ ದೇಶ ನರೇಂದ್ರ ಮೋದಿಯವರಿಂದ ಸ್ಪಷ್ಟೀಕರಣವನ್ನು ಬಯಸುತ್ತಿರುವಾಗ, ಮೋದಿಯ ವೌನದ ಹಿಂದಿರುವ ವಾಸ್ತವಗಳನ್ನು ಮನಮೋಹನ್ ಸಿಂಗ್ ಬಯಲಿಗೆಳೆದಿದ್ದಾರೆ.
ಒಬ್ಬ ವಿರೋಧ ಪಕ್ಷದ ಮುಖಂಡನಾಗಿ ಅವರು ಮಾತನಾಡಿರುವುದಲ್ಲ. ವಿರೋಧ ಪಕ್ಷದ ಉಳಿದ ನಾಯಕರಂತೆ ಟೀಕೆಯಷ್ಟೇ ಅವರ ಮಾತಿನ ಉದ್ದೇಶವಾಗಿರಲಿಲ್ಲ. ತನ್ನ ಅನುಭವದ ಬಲದಲ್ಲಿ ಅವರು ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಆತುರದ ನೋಟು ನಿಷೇಧ ಹೇಗೆ ಈ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಲಿದೆ ಎನ್ನುವುದನ್ನು ಬಿಡಿಸಿಟ್ಟರು. ಇದೇ ಸಂದರ್ಭದಲ್ಲಿ ಕಪ್ಪು ಹಣದ ವಿರುದ್ಧ ಹೋರಾಟ ಮಾಡುವ ಕುರಿತಂತೆಯೂ ತಮ್ಮ ಬದ್ಧತೆಯನ್ನು ಅವರು ವ್ಯಕ್ತಪಡಿಸಿದ್ದರು. ಸಿಂಗ್ ಅವರ ಮಾತುಗಳಿಗೆ ಸ್ಪಷ್ಟೀಕರಣವನ್ನು ನೀಡುವುದು, ಅವರ ಗೊಂದಲಗಳನ್ನು ನಿವಾರಿಸಿ, ಹೇಗೆ ಭವಿಷ್ಯದಲ್ಲಿ ಎಲ್ಲವೂ ಸರಿಯಾಗಲಿದೆ ಎನ್ನುವ ವಿವರವನ್ನು ನೀಡುವುದು ಪ್ರಧಾನಿ ಮೋದಿಯವರ ಕರ್ತವ್ಯವಾಗಿತ್ತು. ಆದರೆ, ಮೋದಿ ಮತ್ತು ಬಳಗ ಎಂದಿನ ಶೈಲಿಯಲ್ಲೇ ಹಗುರವಾಗಿ ಮಾತನಾಡಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದಕ್ಕೆ ಹೊರಟಿದೆ. ‘‘ಕಪ್ಪು ಹಣವನ್ನು ಬದಲಿಸಲು ವಿರೋಧ ಪಕ್ಷಗಳಿಗೆ ಅವಕಾಶ ಸಿಗದೇ ಇರುವುದರಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ’’ ಎಂದು ಬಹುದೊಡ್ಡ ಆರೋಪವನ್ನೇ ಮಾಡಿದೆ. ಅಂದರೆ, ನೋಟು ನಿಷೇಧದ ವಿರುದ್ಧ ಮಾತನಾಡಿದವರೆಲ್ಲ ಕಪ್ಪು ಹಣದ ಪರವಾಗಿರುವವರು ಎಂಬ ಅಗ್ಗದ ತರ್ಕದ ಮೂಲಕ ಜನರನ್ನು ಮೋಸಗೊಳಿಸಲು ಹೊರಟಿದೆ. ನೋಟು ನಿಷೇಧದ ಬಳಿಕ ದೇಶಾದ್ಯಂತ ನಡೆಯುತ್ತಿರುವ ಕೋಲಾಹಲಕ್ಕೆ ಕುರುಡಾಗಿದೆ. ದೇಶದಲ್ಲಿ ಏನೂ ಸಂಭವಿಸಿಲ್ಲ, ಎಲ್ಲವೂ ವಿರೋಧ ಪಕ್ಷಗಳ ಸೃಷ್ಟಿ ಎಂದು ವಾಸ್ತವಕ್ಕೆ ಬೆನ್ನು ಹಾಕಿ ಕೂತಿದೆ. ಆದರೆ ಇದು ಎಲ್ಲಿಯವರೆಗೆ? ಈಗಾಗಲೇ ಸಣ್ಣ ಪುಟ್ಟ ಉದ್ದಿಮೆಗಳೆಲ್ಲ ನೆಲ ಕಚ್ಚಿದೆ. ಕಟ್ಟಡ ಕಾಮಗಾರಿಗಳೆಲ್ಲ ತಟಸ್ಥವಾಗಿವೆ. ದಿನಗೂಲಿ ಕಾರ್ಮಿಕರು ಕೆಲಸ ಕಳೆದು ಕೊಂಡು ಬೀದಿಗೆ ಬಿದ್ದಿದ್ದಾರೆ. ಚಿಲ್ಲರೆ ವ್ಯಾಪಾರಿಗಳೆಲ್ಲ ನಷ್ಟ ಅನುಭವಿಸುತ್ತಿದ್ದಾರೆ. ಇವುಗಳಿಗೆಲ್ಲ ನರೇಂದ್ರ ಮೋದಿ ನೀಡುತ್ತಿರುವ ಪರಿಹಾರ ‘‘ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಮೊರೆ ಹೋಗಿ, ಕಾರ್ಡ್‌ಗಳನ್ನು ಬಳಸಿ’’ ಎನ್ನುವುದಾಗಿದೆ.
ಈ ದೇಶದ ಅರ್ಥವ್ಯವಸ್ಥೆಯ ಪ್ರಾಥಮಿಕ ಜ್ಞಾನವೂ ಇಲ್ಲದಂತಹ ವ್ಯಕ್ತಿ ಮಾತ್ರ ಇಂತಹದೊಂದು ಸಲಹೆಯನ್ನು ನೀಡಬಲ್ಲ. ಇಲ್ಲಿರುವ ಸಣ್ಣ ಉದ್ದಿಮೆಗಳು, ಕೃಷಿ ಉದ್ಯಮಗಳು ಕಾರ್ಡ್ ಬಳಸುವ ಅವಕಾಶಗಳನ್ನು ಹೊಂದಿಲ್ಲದೇ ಇರುವುದರ ಕುರಿತಂತೆ ಮೋದಿ ಅರಿವಿಲ್ಲದವರಂತೆ ವರ್ತಿಸುತ್ತಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್‌ನಿಂದಾಗಿ ಈ ದೇಶದ ಚಿಲ್ಲರೆ ಉದ್ಯಮಗಳೆಲ್ಲ ನೆಲಕಚ್ಚಿ ಅದು ದೇಶದ ಮೇಲೆ ಬೀರುವ ಪರಿಣಾಮಗಳ ಎಲ್ಲಷ್ಟೂ ಕಾಳಜಿ ಹೊಂದಿಲ್ಲದೇ ಇರುವುದು ಮೋದಿಯ ಅಸೂಕ್ಷ್ಮ ಆಡಳಿತಕ್ಕೆ ಉದಾಹರಣೆಯಾಗಿದೆ. ಬಡವರ ಬದುಕನ್ನು ಅವರು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ ಮತ್ತು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಕ್ರಿಮಿನಲ್ ಚಟುವಟಿಕೆಗಳು, ಹಿಂಸೆಗಳು ಇನ್ನಷ್ಟು ಹೆಚ್ಚಳವಾಗಲು ಇದು ಕಾರಣವಾಗಲಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದಂತೆ ಅರಾಜಕತೆ ಅಧಿಕವಾಗುವುದು ಸಹಜ.
ಪ್ರಶ್ನಿಸಿದವರನ್ನೆಲ್ಲ ಕಾಳಧನಕೋರರೆಂದು ಘೋಷಿಸಿ ಮೋದಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಾ ಹೋಗುತ್ತಿದೆ. ಈವರೆಗೆ ಮೋದಿಯ ಕ್ರಮವನ್ನು ಸಮರ್ಥಿಸಿಕೊಂಡು ಬರುತ್ತಿದ್ದ ಬಿಜೆಪಿ ಕಾರ್ಯಕರ್ತರೇ ಅಸಮಾಧಾನದಿಂದ ಬುಸುಗುಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಈ ದೇಶದ ಆರ್ಥಿಕ ತಜ್ಞರು ಮಧ್ಯ ಪ್ರವೇಶ ಮಾಡಬೇಕಾದಂತಹ ಸಂದರ್ಭ ಎದುರಾಗಿದೆ. ಮೊತ್ತ ಮೊದಲಾಗಿ ಮೋದಿ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ. ಸರ್ವ ಪಕ್ಷದ ಜೊತೆಗೆ ಸಮಾಲೋಚನೆ ನಡೆಸಿ ಎಲ್ಲರ ವಿಶ್ವಾಸದೊಂದಿಗೆ ಸಲಹೆ, ವಿಚಾರ ವಿನಿಮಯ ಮಾಡಿ ಮುಂದಕ್ಕೆ ಹೆಜ್ಜೆ ಇಡಬೇಕು. ಇಲ್ಲವಾದರೆ ಈ ಆರ್ಥಿಕ ಹುಲಿ ಸವಾರಿ ಮೋದಿಯ ಪಾಲಿಗೆ ಬಲು ದುಬಾರಿಯಾಗಿ ಪರಿಣಮಿಸಲಿದೆ.







