ಇಂದಿನಿಂದ ‘ಮಂಗಳೂರು ದ್ರಾಕ್ಷಾರಸ ಉತ್ಸವ’
ಮಂಗಳೂರು, ನ.25: ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ದ್ರಾಕ್ಷಾರಸ ಮಂಡಳಿ ಆಶ್ರಯದಲ್ಲಿ ನಗರದಲ್ಲಿ ಪ್ರಥಮ ಬಾರಿಗೆ ಮೂರು ದಿನಗಳ ‘ಮಂಗಳೂರು ದ್ರಾಕ್ಷಾರಸ ಉತ್ಸವ- 2016’ (ವೈನ್ ೆಸ್ಟ್) ನ.26ರಿಂದ 28ರವರೆಗೆ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜೆ, ನ.26ರಂದು ಸಂಜೆ 5 ಗಂಟೆಗೆ ಉದ್ಘಾಟನೆ ನಡೆಯಲಿದೆ ಅವರು ಈ ವಿಷಯ ತಿಳಿಸಿದರು.
ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ತೋಟಗಾರಿಕೆ ಮತ್ತು ಕೃಷಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದ್ರಾಕ್ಷಾರಸ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಜೆ. ಆರ್. ಲೋಬೊ ಅಧ್ಯಕ್ಷತೆ ವಹಿಸುವರು ಎಂದರು.
ಉತ್ಸವದಲ್ಲಿ ಸುಮಾರು 10-12 ವೈನರಿಗಳು ಭಾಗವಹಿಸಲಿದ್ದು, ಸುಮಾರು 150ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಪ್ರದರ್ಶಿಸಲಾಗುವುದು. ಆರೋಗ್ಯಕರ ವೈನ್ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ದ್ರಾಕ್ಷೆ ಬೆಳೆಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ದ್ರಾಕ್ಷಾರಸ ಉತ್ಸವವನ್ನು ಕಳೆದ ಮೂರು ವರ್ಷಗಳಿಂದ ನಡೆಸಲಾಗುತ್ತಿದೆ ಎಂದು ಅವರು ನುಡಿದರು.
<210 ಕೋಟಿ ಆದಾಯ ನಿರೀಕ್ಷೆ: ಕಳೆದ ಆರ್ಥಿಕ ವರ್ಷದಲ್ಲಿ ಒಂದು ಕೋಟಿ ಲೀ. ದ್ರಾಕ್ಷಾರಸ ಉತ್ಪಾದಿಸಲಾಗಿದೆ. 2015-16ನೆ ಸಾಲಿನಲ್ಲಿ 193 ಕೋಟಿ ರೂ. ಆದಾಯ ಬಂದಿದೆ. ಈ ಬಾರಿ 210 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
<
ವೈನ್ ಬಳಕೆಯಲ್ಲಿ ಮಂಗಳೂರು ದ್ವಿತೀಯ!: ವೈನ್ ಬಳಕೆಯಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ಎರಡನೆ ಸ್ಥಾನ ಪಡೆದಿದೆ. ಮಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ವೈನ್ ಉಪಯೋಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಮಿರ್ಜೆ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು, ಮ್ಯಾನೇಜರ್ ಸರ್ವೇಶ್, ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಯೋಗೀಶ್ ಎಚ್.ಆರ್. ಮುಂತಾದವರು ಉಪಸ್ಥಿತರಿದ್ದರು.







