ಉಡುಪಿ: ರಾಜ್ಯಮಟ್ಟದ ಶಾಲಾ ಕರಾಟೆಗೆ ಚಾಲನೆ

ಉಡುಪಿ, ನ.25: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟವು ಶುಕ್ರವಾರ ಸಂಜೆ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಣಿಪಾಲ ಎಂಐಟಿ ನಿರ್ದೇಶಕ ಡಾ.ಜಿ.ಕೆ. ಪ್ರಭು, ಉಡುಪಿ ಪವರ್ ಕಾರ್ಪೊರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉಡುಪಿ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಬಡಗಬೆಟ್ಟು ಕ್ರೆ.ಕೋ-ಆಫ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ, ನಗರಸಭಾ ಸದಸ್ಯೆ ಗೀತಾ ರವಿ ಶೇಟ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಎಚ್., ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಜಿಲ್ಲಾಧ್ಯಕ್ಷ ರವಿ ಸಾಲ್ಯಾನ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಳತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ ಶೇಟ್, ಸದಸ್ಯೆ ಬಿ.ವಸಂತಾ ಬಾಯಿ, ದೈಹಿಕ ಶಿಕ್ಷಣಾಧಿಕಾರಿಗಳಾದ ದತ್ತಾತ್ರೇಯ ನಾಯಕ್ ಕುಂದಾಪುರ, ಶೇಖರ ಗೌಡ ಪಾಟೀಲ್, ಎಂ.ಎಂ.ಸಾಜರಿ, ರವಿರಾಜ್ ನಾಯಕ್, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಬಿ., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕುಸುಮಾ, ಆಕಾಶ್ ರಾವ್, ಯಜ್ಞೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ಕಾರ್ಯಕ್ರಮ ಸಂಘಟನಾ ಕಾರ್ಯಾಧ್ಯಕ್ಷ ಪಿ.ಅಮೃತ್ ಶೆಣೈ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಚಿಕೇತ್ ಮತ್ತು ಕಿಶನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
*ಮೆರವಣಿಗೆ: ಉದ್ಘಾಟನೆಗೂ ಮುನ್ನ ಜೋಡುಕಟ್ಟೆಯಿಂದ ವಳಕಾಡು ಶಾಲೆಯವರೆಗೆ ಕ್ರೀಡಾ ಮೆರವಣಿಗೆ ನಡೆಯಿತು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮತ್ತು ಸದಸ್ಯರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ದಿನೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.
*1,500 ಮಂದಿ ಕರಾಟೆಪಟುಗಳು
ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 28 ಜಿಲ್ಲೆಗಳ 1,500ಕ್ಕೂ ಅಧಿಕ ಕರಾಟೆಪಟುಗಳು ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್. ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
64 ಕಸರತ್ತು ಕಲೆಗಳಲ್ಲಿ ಕರಾಟೆಯೂ ಒಂದಾಗಿದ್ದು, ಇದು ಚೀನಾ ಮತ್ತು ಜಪಾನ್‌ಗಳಲ್ಲಿ ಅಧಿಕ ಪ್ರಸಿದ್ಧಿ ಪಡೆದು ವಿಶ್ವದಾದ್ಯಂತ ಪಸರಿಸಿದೆ ಎಂದರು. ಹಿಂದೆ ರಾಜಮನೆತನ ಕಲಿಯುತ್ತಿದ್ದ ಈ ಕಲೆ ಇಂದು ಜನಸಾಮಾನ್ಯರೂ ಕಲಿಯುವಂತಾಗಿದೆ ಎಂದವರು ಹೇಳಿದರು.







